Saturday, June 10, 2023

Latest Posts

ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾ.ಪಂ. ಕಾರ್ಯದರ್ಶಿ

ಹೊಸದಿಗಂತ ವರದಿ ಮಂಡ್ಯ:

ನಿವೇಶನದ ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಲಂಚದ ಬೇಡಿಕೆ ಇಟ್ಟು ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಡ್ಯ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ (ಗ್ರೇಡ್-1) ದಯಾನಂದ (54) ಎಂಬಾತನೇ ಲೋಕಾಯುಕ್ತ ಬಲೆಗೆ ಬಿದ್ದವರು.

ಘಟನೆ ವಿವರ:

ಮಂಡ್ಯದ ಶ್ರೀರಾಮ ಬಡಾವಣೆಯಲ್ಲಿ ಮಂಜುನಾಥ್ ಎಂಬುವರು 30*40 ಅಳತೆಯ ನಿವೇಶನ ಖರೀದಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿ ಹಾಗೂ ಅತ್ತೆಯವರ ಹೆಸರಿಗೆ ಜಂಟಿ ಖಾತೆ ಮಾಡಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.

ಖಾತೆ ಬದಲಾವಣೆಗೆ ಆರಂಭದಲ್ಲಿ ಕಾರ್ಯದರ್ಶಿ ದಯಾನಂದ 40 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ಇಬ್ಬರ ನಡುವೆ ಒಪ್ಪಂದ ನಡೆದು 35 ಸಾವಿರ ರೂ.ಗಳಿಗೆ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ದೂರುದಾರ ಮಂಜುನಾಥ್ ಅವರು 5 ಸಾವಿರ ರೂ.ಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಆರೋಪಿ ದಯಾನಂದ 5 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಮಧ್ಯಾಹ್ನ 12.30ರ ಸಮಯದಲ್ಲಿ ದಾಳಿ ನಡೆಸಿ ದಯಾನಂದನನ್ನು ವಶಕ್ಕೆ ಪಡೆದರು.

ಗ್ರಾಮಸ್ಥರಿಂದ ಗದ್ದಲ:

ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಾರ್ಯದರ್ಶಿ ದಯಾನಂದ್‌ನನ್ನು ವಶಕ್ಕೆ ಪಡೆಯುತ್ತಿದ್ದ ಸುದ್ಧಿ ತಿಳಿದ ಕೂಡಲೇ ಕೆಲ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಆಗಮಿಸಿ ಗದ್ದಲ ಸೃಷ್ಠಿಸಿದರು.
ದೂರುದಾರ ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯದರ್ಶಿ ದಯಾನಂದ್ ಪರವಾಗಿ ಮಾತನಾಡಿದರು. ಆದರೆ ಪೊಲೀಸರು ಇದಾವುದಕ್ಕೂ ಕಿವಿಗೊಡದೆ ಲಂಚ ಸ್ವೀಕರಿಸುತ್ತಿದ್ದ ದಯಾನಂದ್‌ನನ್ನು ವಶಕ್ಕೆ ಪಡೆದು ಕಚೇರಿಗೆ ಕರೆತರುವಲ್ಲಿ ಯಶಸ್ವಿಯಾದರು.

ಲೋಕಾಯುಕ್ತ ಎಸ್‌ಪಿ ಶ್ರೀನಾಥ್‌ಜೋಷಿ, ಡಿವೈಎಸ್ಪಿ ಸುನಿಲ್‌ಕುಮಾರ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಬ್ಯಾಟರಾಯಗೌಡ ಅವರು ಬಲೆಗೆ ಬೀಳಿಸಿದ್ದಾರೆ. ಸಿಬ್ಬಂದಿಗಳಾದ ಶಂಕರ್, ಮಹದೇವಯ್ಯ, ಶರತ್, ಯೋಗೇಶ್, ನಂದೀಶ್, ಚಾಲಕರಾದ ನವೀನ್, ಶಿವಕುಮಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!