ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಿಸುವ ಶಕ್ತಿ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.
ಇದರ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಕೂಡ ಯೋಜನೆಗೆ ಚಾಲನೆ ಸಿಕ್ಕಿದ್ದು, ಮಹಿಳೆಯರು ಖುಷಿಯಿಂದಲೇ ಬಸ್ ಏರಿದ್ದಾರೆ.
ಅದ್ರಲ್ಲೂ ಧಾರವಾಡದಲ್ಲಿ ವೃದ್ಧೆಯೊಬ್ಬರು ಉಚಿತವಾಗಿ ಬಸ್ನಲ್ಲಿ ಓಡಾಡಲು ಅವಕಾಶ ಸಿಕ್ಕ ಖುಷಿಯಲ್ಲಿ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಬಸ್ ಏರಿದ್ದಾರೆ.ಸದ್ಯ ಅಜ್ಜಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಸ್ವತಃ ಸಿಎಂ ಸಿದ್ಧರಾಮಯ್ಯ ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡು ಖುಷಿವ್ಯಕ್ತಪಡಿಸಿದ್ದಾರೆ .’ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು.
ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ. ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು’ ಎಂದು ಹೇಳಿದ್ದಾರೆ.
ಅಂದಹಾಗೆ ಆ ಅಜ್ಜಿ ನಿಂಗವ್ವ ಸಿಂಗಾಡಿ ಅವರು ಸವದತ್ತಿಯಲ್ಲಿ ಮೊಮ್ಮಗನ ಮನೆ ಗೃಹ ಪ್ರವೇಶ ಇರುವ ಹಿನ್ನೆಲೆ ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದು ಸವದತ್ತಿ ಕಡೆಗೆ ಪ್ರಯಾಣ ಮಾಡಿದ್ದಾರೆ.ಧಾರವಾಡಕ್ಕೆ ಬಂದಾಗ ಉದ್ಘಾಟನೆಗಾಗಿ ಶೃಂಗಾರಗೊಂಡಿದ್ದ ಬಸ್ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಬಸ್ ಏರಿ ಕುಳಿತಿದ್ದಾರೆ. ಬಸ್ ಬಿಡುವಾಗ ಉಧೋ ಉಧೋ ಎಂದು ಜಯಘೋಷ ಮೊಳಗಿಸಿದ್ದಾರೆ.