ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ವನ್ನು ವಿಧಾನಪರಿಷತ್ತಿನಲ್ಲಿ ಬುಧವಾರ ಅಂಗೀಕರಿಸಲಾಯಿತು.
ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ ಕೆ ಶಿವಕುಮಾರ್ ಅವರು , 20 ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಅನ್ನು ಸದನದಲ್ಲಿ ಮಂಡಿಸಿ, ಅದರ ಉದ್ದೇಶವನ್ನು ವಿವರಿಸಿದರು. ನಂತರ ಪ್ರತಿಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯ, ಆಕ್ಷೇಪ ಕಾರಣಗಳನ್ನು ತಿಳಿಸಿದರು.
ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಶಾಸಕರನ್ನು ಅಭಿನಂದಿಸುತ್ತೇನೆ. ವಿರೋಧ ಪಕ್ಷಗಳ ನಾಯಕರು ತಮ್ಮದೇ ಆದ ಅಭಿಪ್ರಾಯ ತಿಳಿಸಿದ್ದಾರೆ. ಅವರು ಅಭಿಪ್ರಾಯವನ್ನು ನಾನು ವಿರೋಧಿಸುವುದಿಲ್ಲ. ಅವರಲ್ಲಿ ಕೆಲವರಿಗೆ ರಾಜಕೀಯ ಇಚ್ಚಾಶಕ್ತಿಯೂ ಇದೆ. ಅದರಲ್ಲಿ ತಪ್ಪಿಲ್ಲ. ಈಗಿರುವ ವ್ಯವಸ್ಥೆಯಲ್ಲಿಯೇ ಬೆಂಗಳೂರು ನಗರವನ್ನು ಮುನ್ನಡೆಸುವುದು ಅಸಾಧ್ಯ ಎಂದು ಅವರು ಆತ್ಮಸಾಕ್ಷಿ ಮೂಲಕ ಒಪ್ಪಿದ್ದಾರೆ. ಯಲಹಂಕ, ಕೆಂಗೇರಿ ಉಪನಗರಗಳು ಈಗ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಹೀಗೆ ಬೆಳೆದಿರುವ ಬೆಂಗಳೂರಿನ ಆಡಳಿತವನ್ನು ನಾವು ವಿಕೇಂದ್ರೀಕರಣ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ನಾವು ಬೆಂಗಳೂರನ್ನು ಛಿದ್ರ ಮಾಡಲು ಹೋಗುತ್ತಿಲ್ಲ, ಬೆಂಗಳೂರನ್ನು ಗಟ್ಟಿ ಮಾಡುತ್ತಿದ್ದೇವೆ. ಬೆಂಗಳೂರಿನ ಗೌರವ ಉಳಿಸಬೇಕು. ಮಾಜಿ ಪ್ರಧಾನಿ ವಾಜಪೇಯಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಾಗ, ಇಷ್ಟು ದಿನ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಕಾರಣ ಇಲ್ಲಿನ ಆಡಳಿತ. ಕೇವಲ ಕೃಷ್ಣ ಅವರ ಸರ್ಕಾರ ಅಥವಾ ಮತ್ತೊಂದು ಸರ್ಕಾರ ಮಾತ್ರ ಇದಕ್ಕೆ ಕಾರಣವಲ್ಲ. ಇಲ್ಲಿನ ಜನ ಅಷ್ಟರ ಮಟ್ಟಿಗೆ ವಿದ್ಯಾವಂತರು, ಬುದ್ದಿವಂತರು, ಪ್ರಜ್ಞಾವಂತರಿದ್ದಾರೆ. ನೆಹರೂ ಅವರು ಇಲ್ಲಿಯೇ ಇಸ್ರೋ, ಹೆಚ್ಎಂಟಿ, ಹೆಚ್ಎಎಲ್, ಐಟಿಐ ಆರಂಭಿಸಿದ್ದು ಏಕೆ? ಅನೇಕ ಮಹಾನ್ ಸಂಶೋಧಕರು, ಉದ್ದಿಮೆದಾರರು ಬೆಂಗಳೂರಿನಲ್ಲೇ ಓದಿದ್ದಾರೆ ಎಂದು ವಿವರಿಸಿದರು.
ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದ ಬೆಂಗಳೂರು ಮೂರು ಜಿಲ್ಲೆಯಾಯಿತು, ಉಡುಪಿ ಹಾಗೂ ದಕ್ಷಿಣ ಕನ್ನಡ ಬೇರೆ ಜಿಲ್ಲೆಯಾದವು, ಗದಗ ಹಾಗೂ ಹಾವೇರಿ ಎರಡು ಜಿಲ್ಲೆಗಳಾದವು. ಅಶ್ವತ್ಥ್ ನಾರಾಯಣ ಅವರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಡಿ ಎನ್ನುತ್ತಿದ್ದರು. ಜಿಬಿಎಯಲ್ಲಿ (ಗ್ರೇಟರ್ ಬೆಂಗಳೂರು ಅಥಾರಿಟಿ) ನಾಮನಿರ್ದೇಶಿತ ಸದಸ್ಯರಿರುವುದಿಲ್ಲ. ಕೇವಲ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಮಾತ್ರ ಮತದಾನ ಹಕ್ಕನ್ನು ಹೊಂದಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.