Friday, September 29, 2023

Latest Posts

ಆನೆ-ಮಂಗಗಳನ್ನು ಕಾಡಿಗಟ್ಟಲು ಬೆಳೆಗಾರರ ಆಗ್ರಹ

ಹೊಸದಿಗಂತ ವರದಿ, ಕೊಡಗು:

ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆ ಮತ್ತು ಮಂಗಗಳ ಹಾವಳಿ ಮಿತಿ ಮೀರಿದ್ದು, ಅಪಾರ ಬೆಳೆಹಾನಿಯಾಗುತ್ತಿದೆ ಎಂದು ಸ್ಥಳೀಯ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಪ್ರಮುಖರಾದ ವಸಂತ ಕುಮಾರ್ ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ರೈತರು, ವನ್ಯಜೀವಿಗಳ ಉಪಟಳದಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಕಾಡಾನೆ ದಾಳಿಯಿಂದ ತೋಟಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದು, ಬೆಳೆ ಹಾನಿಗೆ ಅತ್ಯಲ್ಪ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿದೆ. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಬೆಳೆ ನಾಶವಾಗುತ್ತಿದ್ದು, ಅರಣ್ಯ ಇಲಾಖೆ ಯಾವುದೇ ಪರಿಹಾರ ನೀಡುತ್ತಿಲ್ಲ. ನಿಗದಿತ ಅವಧಿಯೊಳಗೆ ಕಾರ್ಯಾಚರಣೆ ಪೂರ್ಣಗೊಳಿಸಬೇಕು ಮತ್ತು ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಲು ಸಭೆ ನಿರ್ಧರಿಸಿತು.
ಮಂಗಗಳಿಂದ ಭವಿಷ್ಯದ ಬೆಳೆ ನಾಶ: ಮಂಗಗಳ ಹಾವಳಿ ಮಿತಿ ಮೀರಿದ್ದು, ನೂರಾರು ಸಂಖ್ಯೆಯಲ್ಲಿ ದಾಳಿ ಇಡುತ್ತಿವೆ. ಈ ವರ್ಷದ ಫಸಲು ಮಾತ್ರವಲ್ಲದೆ, ಮುಂದಿನ ವರ್ಷದ ಫಸಲನ್ನೂ ನಾಶ ಮಾಡುತ್ತಿವೆ. ಗಿಡಬಳ್ಳಿ, ತರಕಾರಿ, ಹಣ್ಣುಹಂಪಲು ಕಾಫಿ, ತೆಂಗು, ಅಡಿಕೆ ಸೇರಿದಂತೆ ಎಲ್ಲಾ ಫಸಲು ಮಂಗಗಳ ಪಾಲಾಗುತ್ತಿದೆ. ತಕ್ಷಣ ಅರಣ್ಯ ಇಲಾಖೆ ಮಂಗಗಳನ್ನು ಹಿಡಿದು ದಟ್ಟಾರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಬೆಳೆಗಾರರು ಒತ್ತಾಯಿಸಿದರು.
ಬೆಳೆಗಾರರು ಹಾಗೂ ಗ್ರಾಮಸ್ಥರೊಂದಿಗೆ ಅರಣ್ಯ ಅಧಿಕಾರಿಗಳು ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಕೆ.ವಿಶ್ವನಾಥ್, ಟಿ.ಬಿ.ತಿಮ್ಮಯ್ಯ, ಕೆ.ಎನ್.ವಾಸು, ಕೋಡೀರ ಅನಿಲ್, ಜೋಸ್ ರಾಮಪುರಂ, ಟಿ.ಪಿ.ನಂಜಪ್ಪ, ಎ.ಕೆ.ಅಬ್ದುಲ್ಲಾ, ಹಕೀಂ, ದಮಯಂತಿ, ಗಣಪತಿ, ವಿಮಲಾ ಅಯ್ಯಪ್ಪ, ಲವ, ಜಯಕುಮಾರ್, ಕಿಶೋರ್, ಚಂದ್ರು ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!