ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಚಂಡೀಗಢದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಗುಜರಾತ್, ಇದೀಗ ಮೇ 31ರಂದು ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿಯನ್ನು ಎದುರಿಸಲಿದೆ.
ಆರಂಭದಲ್ಲೇ ರಾಜಸ್ಥಾನ್‌ಗೆ ಆಘಾತ
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡಕ್ಕೆ ಆರಂಭವೇ ನಿರಾಸೆ ತಂದಿತು. ಪ್ರಮುಖ ಬ್ಯಾಟರ್‌ಗಳ ವಿಕೆಟ್‌ಗಳು ಬೇಗನೆ ಪತನಗೊಂಡರೂ, ವೈಭವ್ ಸೂರ್ಯವಂಶಿ ಜವಾಬ್ದಾರಿಯುತ ಆಟವಾಡಿ ತಂಡದ ಮೊತ್ತವನ್ನು ಕಟ್ಟಿಕೊಟ್ಟರು. ಅವರ ಸ್ಫೋಟಕ ಇನ್ನಿಂಗ್ಸ್ ರಾಜಸ್ಥಾನ್‌ಗೆ ಸ್ಪರ್ಧಾತ್ಮಕ ಮೊತ್ತ ತಲುಪಿಸಲು ನೆರವಾಯಿತು.
ವೈಭವ್ ಹೋರಾಟಕ್ಕೆ ಫೆರೇರಾ ಸಾಥ್
ಶತಕದ ಸನಿಹ ತಲುಪಿದ ವೈಭವ್ ಮತ್ತೊಮ್ಮೆ ದೊಡ್ಡ ಮೈಲುಗಲ್ಲು ತಪ್ಪಿಸಿಕೊಂಡರು. ಕೊನೆಯ ಹಂತದಲ್ಲಿ ಡೊನೊವನ್ ಫೆರೇರಾ ವೇಗದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 214 ರನ್‌ಗಳಿಗೆ ಏರಿಸಿದರು. ಇದರಿಂದ ಗುಜರಾತ್‌ಗೆ 215 ರನ್‌ಗಳ ಕಠಿಣ ಗುರಿ ಎದುರಾಯಿತು.
ಇದನ್ನೂ ಓದಿ:
ಗಿಲ್-ಸುದರ್ಶನ್ ಗೆಲುವಿನ ಅಡಿಪಾಯ
ದೊಡ್ಡ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಪರ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅಮೋಘ ಜೊತೆಯಾಟ ಕಟ್ಟಿದರು. ಆರಂಭದಲ್ಲಿ ಸುದರ್ಶನ್‌ಗೆ ಸಿಕ್ಕ ಜೀವದಾನವನ್ನು ರಾಜಸ್ಥಾನ್ ದುಬಾರಿಯಾಗಿ ಅನುಭವಿಸಬೇಕಾಯಿತು. ಇಬ್ಬರೂ ಸೇರಿ ಭರ್ಜರಿ ರನ್‌ಗಳ ಪಾಲುದಾರಿಕೆ ನಿರ್ಮಿಸಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು.
ಫೈನಲ್‌ನಲ್ಲಿ ಆರ್‌ಸಿಬಿಗೆ ಸವಾಲ್
ಶುಭಮನ್ ಗಿಲ್ ಸಿಡಿಸಿದ ಅದ್ಭುತ ಶತಕ ಗುಜರಾತ್ ಗೆಲುವಿನ ಪ್ರಮುಖ ಆಧಾರವಾಯಿತು. ಅಂತಿಮ ಹಂತದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೆಲಸ ಮುಗಿಸಿ ತಂಡವನ್ನು 18.4 ಓವರ್‌ಗಳಲ್ಲೇ ಗುರಿ ತಲುಪಿಸಿದರು. ಇದರೊಂದಿಗೆ ಗುಜರಾತ್ ಫೈನಲ್ ಪ್ರವೇಶಿಸಿದ್ದು, ಇದೀಗ ಚಾಂಪಿಯನ್ ಪಟ್ಟಕ್ಕಾಗಿ ಆರ್‌ಸಿಬಿ ವಿರುದ್ಧ ಮಹಾಯುದ್ಧಕ್ಕೆ ಸಜ್ಜಾಗಿದೆ.



