ದಿಗಂತ ವರದಿ ಮಡಿಕೇರಿ:
ಹಿರಿಯ ಸಾಹಿತಿ, ಸಿನಿಮಾ ನಿರ್ಮಾಪಕ ಎನ್.ಎಸ್.ದೇವಿ ಪ್ರಸಾದ್ (79) ಅವರು ಸೋಮವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಇಂದಿರಾ, ಪುತ್ರಿಯರಾದ ಸಹನಾ ಹಾಗೂ ಪ್ರಜ್ಞಾ ಅವರನ್ನು ಅಗಲಿದ್ದಾರೆ.
ಸಂಪಾಜೆಯ ನಂಜಯ್ಯನಮನೆ ದಿ.ಸಣ್ಣಯ್ಯ ಪಟೇಲ್ ಹಾಗೂ ಪೂವಮ್ಮ ದಂಪತಿಯ ಏಕೈಕ ಪುತ್ರರಾಗಿದ್ದ ಎನ್.ಎಸ್ ದೇವಿ ಪ್ರಸಾದ್ ಹುಟ್ಟು ಹೋರಾಟಗಾರ ಮಾತ್ರವಲ್ಲದೆ, ಬಹುಮುಖ ಪ್ರತಿಭೆಯ ಅವರು ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಿನಿಮಾ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲಿ ಹಾಗೂ ಜನಪರ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
1998ರಲ್ಲಿ ಎದ್ದಿದ್ದ ಕೊಡಗು ಪ್ರತ್ಯೇಕತೆಯ ಕೂಗಿನ ವಿರುದ್ದ ‘ಪ್ರಜಾವೇದಿಕೆ’ಯನ್ನು ಸ್ಥಾಪಿಸಿ, ಕನ್ನಡ ಪರ ಸಂಘಟನೆಗಳ ಬೆಂಬಲ ಪಡೆದು ಅವರು ನಡೆಸಿದ ಹೋರಾಟದ ಫಲಶೃತಿಯಾಗಿ ಕೊಡಗು ಜಿಲ್ಲೆ ಕರ್ನಾಟಕದಲ್ಲೇ ಉಳಿಯುವಂತಾಗಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.
ಕರ್ನಾಟಕ ಅರೆಭಾಷೆ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಅಕಾಡೆಮಿಗೆ ಭದ್ರ ಬುನಾದಿಯನ್ನು ಹಾಕಿದ್ದ ಅವರನ್ನು ಇತ್ತೀಚೆಗಷ್ಟೇ ಅರೆಭಾಷೆ ಅಕಾಡೆಮಿಯು 2019-20ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿತ್ತಲ್ಲದೆ, ದೇವಿಪ್ರಸಾದ್ ಕುರಿತು ಅಕಾಡೆಮಿಯು ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದೆ.
ಸಂಪಾಜೆ ಜೂನಿಯರ್ ಕಾಲೇಜಿನ ಅಧ್ಯಕ್ಷರಾಗಿ, ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು.ಹಲವು ಸಂಘಸಂಸ್ಥೆಗಳ ಬೆಳವಣಿಗೆಗೂ ಅವರು ಕಾರಣರಾಗಿದ್ದರು.
ಪ್ರಶಸ್ತಿಗಳು: ದೇವಿ ಪ್ರಸಾದ್ ಅವರು ನಿರ್ಮಿಸಿದ ‘ಮೂರು ದಾರಿಗಳು’ ಸಿನಿಮಾಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿದ್ದರೆ, ‘ಶಿರಾಡಿ ಭೂತ’ ನಾಟಕ ರಚಿಸಿ ನಿರ್ದೇಶಿಸಿ ಹಲವು ಕಡೆ ಭರ್ಜರಿ ಪ್ರದರ್ಶನ ಕಂಡು ಉತ್ತಮ ರಂಗಕರ್ಮಿ ಎನಿಸಿಕೊಂಡಿದ್ದರು. ‘ಅಪಹರಣ” ಟೆಲಿ ಚಿತ್ರ ನಿರ್ಮಾಪಕರೂ ಆಗಿದ್ದ ಅವರು “ಗುಡ್ಡದ ಭೂತ” ಟಿ.ವಿ. ಧಾರಾವಾಹಿಯಲ್ಲಿ ನಟಿಸಿದ್ದರು.
ಸಂಪಾಜೆಯಲ್ಲಿ ಲಯನ್ಸ್ ಕ್ಲಬ್ ಸ್ಥಾಪನೆಗೂ ಕಾರಣರಾಗಿದ್ದ ಅವರು, ಸಂಪಾಜೆಯಲ್ಲಿ ಸಹಕಾರ ಹಾಗೂ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದ್ದರು.
“ಅಮರ ಸುಳ್ಯದ ಸ್ವಾತಂತ್ರ್ಯ ಸಮರ” ಇವರ ಸಂಶೋಧನಾತ್ಮಕ ಕೃತಿಯಾಗಿದ್ದು, ಇತಿಹಾಸದ ಅನೇಕ ಸಂಗತಿಗಳನ್ನು ಅವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಅರೆಭಾಷೆಯಲ್ಲಿ ‘ಹೆಂಗಿತ್ ಹೆಂಗಾತ್’ ಎಂಬ ನಾಟಕವನ್ನು ರಚಿಸಿದ್ದ ಅವರು, 1837ರ ಸುಳ್ಯದ ಜನರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ಪರಿಸರದ ಜನರಲ್ಲಿ ಅರಿವು ಮೂಡಿಸಲು 1998ರಲ್ಲಿ “ಅಮರ ಕ್ರಾಂತಿ” ಉತ್ಸವ ನಡೆಸಿ, ಸುಳ್ಯದಿಂದ ಮಂಗಳೂರಿನವರೆಗೆ ಕಾಲ್ನಡಿಗೆ ಜಾಥಾವನ್ನು ಏರ್ಪಡಿಸಿದ್ದರು.
ಸಾಹಿತ್ಯ ಅಭಿಮಾನಿ, ಲೇಖಕರೂ ಆಗಿದ್ದ ದೇವಿಪ್ರಸಾದ್ ಅವರ ಮನೆ ಅಪೂರ್ವ ಗ್ರಂಥಾಲಯವನ್ನು ಹೊಂದಿರುವುದು ವಿಶೇಷವಾಗಿದೆ.