ಗುಜರಾತ್ ಚುನಾವಣೆ: ವಲ್ಸಾದ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿರುವ ಮೋದಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಜೊತೆಗೆ ಭಾವನಗರದಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ತವರು ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದು ಇದೇ ಮೊದಲು.
ಸಂಜೆ 5:45 ರ ಸುಮಾರಿಗೆ, ಭಾವನಗರದಲ್ಲಿ ‘ಪಾಪಾ ನಿ ಪರಿ’ ಲಗ್ನೋತ್ಸವ 2022 ರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ತಂದೆ ಇಲ್ಲದ 522 ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಜ್ಜಾಗಿದೆ. ಅಕ್ಟೋಬರ್ 13 ರಂದು ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಗುಜರಾತ್ ಗೌರವ್ ಯಾತ್ರೆ” ಉದ್ಘಾಟಿಸುತ್ತಿದ್ದಂತೆ ಗುಜರಾತ್‌ನಲ್ಲಿ ತೀವ್ರ ಪ್ರಚಾರ ನಡೆಯುತ್ತಿದೆ.

“ಗುಜರಾತ್ ಗೌರವ್ ಯಾತ್ರೆ” ಉದ್ಘಾಟನೆಗೆ ಒಂದು ದಿನ ಮುಂಚಿತವಾಗಿ, ಜೆಪಿ ನಡ್ಡಾ ಅವರು ಮೆಹ್ಸಾನಾದಲ್ಲಿ ‘ಗುಜರಾತ್ ಗೌರವ್ ಯಾತ್ರೆ’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅಕ್ಟೋಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಕೋಟ್ ಜಿಲ್ಲೆಯ ಜಮ್ಕಂದೋರ್ನಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರ್ಯಾಲಿ ಬಳಿಕ ರೋಡ್ ಶೋ ಕೂಡ ನಡೆಸಿದರು.

ಗುಜರಾತ್‌ನಲ್ಲಿ ಸತತ ಆರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿ, ಈ ವರ್ಷ ಆಮ್ ಆದ್ಮಿ ಪಕ್ಷವು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪೂರ್ಣ ಶಕ್ತಿಯೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ. ಇನ್ನೂ ಕಾಂಗ್ರೆಸ್‌ ಯಾತ್ರೆಗಳ ಮೂಲಕ ತನ್ನ ಗುರಿ ಸಾಧಿಸಲು ಹವಣಿಸುತ್ತಿದೆ. ಒಟ್ಟು ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ರಚನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!