ಗುಜರಾತ್‌ನ ಮೋರ್ಬಿ ಸೇತುವೆ ದುರಂತ: ತನಿಖಾ ವರದಿಯಲ್ಲಿ ಬಯಲಾಯಿತು ಸತ್ಯಾಂಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗುಜರಾತ್‌ನ (Gujarat) ಮೋರ್ಬಿಯಲ್ಲಿನ ಸೇತುವೆ ದುರಂತದ (Morbi Bridge Tragedy) ತನಿಖಾ ವರದಿಯಲ್ಲಿ ಹಲವು ಅಂಶಗಳು ಬಯಲಾಗಿದೆ. ತೂಗು ಸೇತುವೆಯ ಕೆಲವು ತಂತಿಗಳು ಮೊದಲೇ ಮುರಿದಿದ್ದು, ಹಲವು ತುಕ್ಕು ಹಿಡಿದಿದ್ದವು ಎಂದು ವರದಿ ತಿಳಿಸಿದೆ.

ಮೋರ್ಬಿ ಸೇತುವೆ ದುರಂತದ ತನಿಖೆಯನ್ನು ಗುಜರಾತ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು. ಇದೀಗ ಎಸ್‌ಐಟಿ ಸೇತುವೆ ದುರಸ್ತಿ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಹಲವು ಲೋಪಗಳನ್ನು ಪತ್ತೆ ಮಾಡಿದೆ.

1887ರಲ್ಲಿ ಆಗಿನ ಆಡಳಿತಗಾರರು ನಿರ್ಮಿಸಿದ್ದ ಸೇತುವೆಯ 2 ಮುಖ್ಯ ಕೇಬಲ್‌ಗಳಲ್ಲಿ ಒಂದು ಕೇಬಲ್‌ನಲ್ಲಿ ತುಕ್ಕಿನ ಸಮಸ್ಯೆಯಿತ್ತು. ಅದರ ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ದುರಂತ ಸಂಭವಿಸಲು ಕಾರಣವಾಗಿರುವ ಸಾಧ್ಯತೆಯಿದೆ. ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದೂ ದುರಂತಕ್ಕೆ ಕಾರಣ ಎಂದು ಎಸ್‌ಐಟಿ ತಿಳಿಸಿದೆ.

ಕೇಬಲ್ ಅನ್ನು 7 ಎಳೆಗಳಿಂದ ರಚಿಸಲಾಗಿದ್ದು, ಅವು ಉಕ್ಕಿನ ತಂತಿಗಳಾಗಿವೆ. ಈ ಕೇಬಲ್ ಅನ್ನು ರೂಪಿಸಲು ಒಟ್ಟು 49 ತಂತಿಗಳನ್ನು 7 ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ. 49 ತಂತಿಗಳಲ್ಲಿ 22 ತುಕ್ಕು ಹಿಡಿದಿರುವುದು ಗಮನಿಸಲಾಗಿದೆ. ಇದು ಘಟನೆಗೂ ಮೊದಲೇ ಮುರಿದು ಹೋಗಿರುವುದನ್ನು ಸೂಚಿಸುತ್ತದೆ.

ಇನ್ನು ಸೇತುವೆ ನವೀಕರಣದ ಸಮಯದಲ್ಲಿ ಹಳೆಯ ಸಸ್ಪೆಂಡರ್‌ಗಳನ್ನು (ಕೇಬಲ್‌ಗಳನ್ನು ಸಂಪರ್ಕಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ ಎಂಬುದನ್ನು ಎಸ್‌ಐಟಿ ಕಂಡುಹಿಡಿದಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆ ಬದಲಾಗಿದ್ದು, ದುರಂತ ಸಂಭವಿಸಲು ಕಾರಣವಾಗಿದೆ ಎಂದು ಉಲ್ಲೇಖಿಸಿದೆ.

ಅಷ್ಟೇ ಅಲ್ಲದೆ ದುರಂತ ಸಂಭವಿಸುವ ಸಂದರ್ಭ ಸೇತುವೆ ಮೇಲೆ 300 ಜನರಿದ್ದರು. ಸೇತುವೆ ಭಾರವನ್ನು ಹೊರುವ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ. ಆದರೂ ಸೇತುವೆಯ ನೈಜ ನಾಮರ್ಥ್ಯವನ್ನು ಪ್ರಯೋಗಾಲಯದ ವರದಿಗಳಿಂದ ದೃಢೀಕರಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!