Sunday, June 4, 2023

Latest Posts

ಗುಂಡೇಟಿಗೆ ಉದ್ಯಮಿ ಬಲಿ ಪ್ರಕರಣ: ಮೂರು ಶಂಕಿತರ ವಿಚಾರಣೆ

ಹೊಸದಿಗಂತ ವರದಿ ಮಡಿಕೇರಿ:

ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶನಿವಾರ ತಡರಾತ್ರಿ ವೀರಾಜಪೇಟೆ ಸಮೀಪದ ತೋರ ಗ್ರಾಮದ ಪಡಚಿಕಾಡು ಎಂಬಲ್ಲಿ ನಡೆದಿದೆ.

ಮೃತರನ್ನು ಅಲ್ಲಿನ ನಿವಾಸಿ ಬೈಮನ ನಾಣಯ್ಯ ಎಂಬವರ ಪುತ್ರ ಬಿ.ಎನ್. ಮಧು(44) ಎಂದು ಗುರುತಿಸಲಾಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ನಿವಾಸಿಗಳಾದ ಕಿರಣ, ಸುಧಿ ಹಾಗೂ ಸುಗುಣ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆದುಮಳ್ಳೂರು ಗ್ರಾಮ ಪಂಚಾಯತಿಯ ತೋರ ಗ್ರಾಮದ ನಿವಾಸಿಯಾಗಿರುವ ಮಧು ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದು, ನಾಗರಬಾವಿಯಲ್ಲಿ ಕಚೇರಿ ಹೊಂದಿದ್ದಾರೆ. ಅಲ್ಲದೆ ಪೀಣ್ಯ ಕೈಗಾರಿಕಾ ಘಟಕದಲ್ಲಿ ಕಾರ್ಖಾನೆ ನಡೆಸಿಕೊಂಡಿರುವ ಇವರು ಕಳೆದ ಎರಡು ದಿವಸದ ಹಿಂದೆ ಊರಿನ ದೇವರ ಉತ್ಸವಕ್ಕೆಂದು ಬಂದಿದ್ದರೆನ್ನಲಾಗಿದೆ.

ಊರಿನ ಹಲವಾರು ಸಭೆ, ಸಮಾರಂಭಗಳಿಗೆ ಉದಾರವಾಗಿ ದಾನ ನೀಡುತ್ತಿದ್ದ ಇವರು, ಶನಿವಾರ ರಾತ್ರಿ 12ಗಂಟೆ ಸುಮಾರಿಗೆ ಊರಿನಲ್ಲಿ ಸ್ನೇಹಿತರ ಜೊತೆಗೆ (ವಿಶು) ಹಬ್ಬದ ಪ್ರಯುಕ್ತ ಮಾತುಕತೆ ನಡೆಸಿ ಬರುವಾಗ ಕೂಗಳತೆ ದೂರದಲ್ಲಿದ್ದ ತನ್ನ ಕಾರಿನ ಬಳಿ ತೆರಳುವ ಸಮಯದಲ್ಲಿ ಹಂತಕರ ಗುಂಡೇಟಿಗೆ ಬಲಿಯಾಗಿರುವುದಾಗಿ ಹೇಳಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಊರಿನ ತೋಟದ ಮರದ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದ್ದು, ಈ ಕೊಲೆಯನ್ನು ಊರಿನ ವ್ಯಕ್ತಿಗಳೇ ಮಾಡಿದ್ದಾರೆ. ಮಗನ ಏಳಿಗೆಯನ್ನು ಸಹಿಸದ‌ವರು ಈ ಕೃತ್ಯ ನಡೆಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃತರ ತಂದೆ ನಾಣಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!