ಸಂಯಮ ಪ್ರಶಸ್ತಿಗೆ ಗುರುಬಸವ ಶ್ರೀ, ಬಸವರಾಜ ಆಯ್ಕೆ

ಹೊಸದಿಗಂತ ವರದಿ,ಬಾಗಲಕೋಟೆ:

ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ 2021 ಮತ್ತು 2022ನೇ ಸಾಲಿನ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 18 ರಂದು ಇಲಕಲ್ಲಿನ ವಿಜಯ ಮಹಾಂತೇಶ ಶಿವಯೋಗಿಗಳ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಯಮ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ತಿಳಿಸಿದರು.
ನವನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೋವಿಡ್ ಹಿನ್ನೆಲೆಯಲ್ಲಿ 2021 ಮತ್ತು 2022ನೇ ಸಾಲಿನ ಸಂಯಮ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗಲಿಲ್ಲ. ಈ ವರ್ಷ ಎರಡು ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2021ನೇ ಸಾಲಿನ ಪ್ರಶಸ್ತಿಗೆ ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠದ ಗುರುಬಸವ ಪಟ್ಟದೇವರ ಶ್ರೀ ಮತ್ತು 2022ನೇ ಸಾಲಿನ ಪ್ರಶಸ್ತಿಗೆ ಮೈಸೂರಿನ ಬಸವ ಮಾರ್ಗದ ಮುಖ್ಯಸ್ಥ ಬಸವರಾಜು ಅವರು ಆಯ್ಕೆಯಾಗಿದ್ದು, ಪಶಸ್ತಿ ತಲಾ 1 ಲಕ್ಷ ರೂ. ನಗದು ಒಳಗೊಂಡಿದೆ ಎಂದರು.
ಗದಗ ಜಿಲ್ಲೆ ಡೊಂಬಳದ ತೋಂಟದಾರ್ಯ ಸಂಸ್ಥಾನ ಮಠದ ಸಿದ್ದರಾಮ ಶ್ರೀ, ಬಾಗಲಕೋಟೆ ನಿಡಸೋಶಿಯ ಸಿದ್ದ ಸಂಸ್ಥಾನ ಮಠದ ಶಿವಲಿಂಗೇಶ್ವರ ಶ್ರೀ, ಬೀದರ ಜಿಲ್ಲೆ ಭಾಲ್ಕಿಯ ಬಸವಲಿಂಗ ಪಟ್ಟದೇವರು ಮತ್ತು ಇಳಕಲ್ ಗುರು ಮಹಾಂತ ಶ್ರೀಗಳ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ದೊಡ್ಡನಗೌಡ ಪಾಟೀಲ ವಹಿಸಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!