ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳ ವಿರುದ್ಧ ಮೇ 7ರಂದು `ಆಪರೇಷನ್ ಸಿಂದೂರ’ ಹೆಸರಿನಡಿಯಲ್ಲಿ ಭಾರತ ಮಾಡಿದ್ದ ದಾಳಿಗೆ ಭಾರತಕ್ಕೆ ಬೇಕಾಗಿದ್ದ 5 ಉಗ್ರರು ಮೃತಪಟ್ಟಿದ್ದಾರೆ .
ಗುಪ್ತಚರ ಮೂಲಗಳ ಪ್ರಕಾರ ಈ ದಾಳಿಯಲ್ಲಿ ಭಾರತ 5 ಮೋಸ್ಟ್ ವಾಂಟೆಂಡ್ ಉಗ್ರರು ಹತರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮುದಸ್ಸರ್ ಖಾದಿಯಾನ್ ಖಾಸ್ ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬು ಹತನಾಗಿದ್ದಾನೆ. ಈತ ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ಮುರಿಡ್ಕೆಯ ಮರ್ಕಜ್ ತೈಬಾದ ಉಸ್ತುವಾರಿಯಾಗಿದ್ದ. ಈತನ ಅಂತ್ಯಕ್ರಿಯೆ ವೇಳೆ ಪಾಕಿಸ್ತಾನ ಸೇನೆಯು ಗೌರವ ವಂದನೆ ಸಲ್ಲಿಸಿತ್ತು.
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಹಫೀಜ್ ಮುಹಮ್ಮದ್ ಜಮೀಲ್ ಮೃತಪಟ್ಟಿದ್ದಾನೆ. ಈತ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸೋದರ ಮಾವನಾಗಿದ್ದ. ಅಲ್ಲದೇ ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾದ ಉಸ್ತುವಾರಿಯಾಗಿದ್ದ. ಯುವಕರ ಮೂಲಭೂತ ಬೋಧನೆ ಮತ್ತು ಜೆಇಎಂಗೆ ನಿಧಿಸಂಗ್ರಹಣೆಯಲ್ಲಿ ಹಫೀಜ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನು.
ಜೈಶ್-ಎ-ಮೊಹಮ್ಮದ್‌ನಲ್ಲಿ ಸಕ್ರಿಯನಾಗಿದ್ದ ಮತ್ತೊಬ್ಬ ಉಗ್ರ ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಘೋಸಿ ಸಹಾಬ್ ಸಾವನ್ನಪ್ಪಿದ್ದಾನೆ. ಈತನೂ ಸಹ ಮೌಲಾನಾ ಮಸೂದ್ ಅಜರ್‌ನ ಸೋದರ ಮಾವನಾಗಿದ್ದ. ಈತ ಜೆಇಎಂಗಾಗಿ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ವಹಿಸಿದ್ದ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಈತ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದನು.
ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದ ಉಗ್ರ ಅಬು ಆಕಾಶಾ ಅಲಿಯಾಸ್ ಖಾಲಿದ್ ಹತನಾಗಿದ್ದಾನೆ. ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಫೈಸಲಾಬಾದ್‌ನಲ್ಲಿ ನಡೆದ ಈತನ ಅಂತ್ಯಕ್ರಿಯೆಯಲ್ಲಿ ಹಿರಿಯ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು.
ಜೈಶ್-ಎ-ಮೊಹಮ್ಮದ್‌ನಲ್ಲಿ ಸಕ್ರಿಯನಾಗಿದ್ದ ಮೊಹಮ್ಮದ್ ಹಸನ್ ಖಾನ್ ಮೃತಪಟ್ಟಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಅವರ ಮಗನಾಗಿದ್ದ. ಹಸನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.