April 29, 2026
Wednesday, April 29, 2026
spot_img

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ಧರೆಗೆ ಉರುಳಿದ ಮರಗಳು, ಕಾರು- ಬೈಕ್ ಗಳು ಜಖಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಗರದಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಇಡೀ ನಗರವೇ ಬೆಚ್ಚಿಬಿದ್ದಿದ್ದು, ಮೃತರ ಕುಟುಂಬಗಳಲ್ಲಿ ಶೋಕ ಆವರಿಸಿದೆ.

ಇತ್ತ ನಗರದ ಹೃದಯಭಾಗವಾದ ವಿಧಾನಸೌಧ, ಮೆಜೆಸ್ಟಿಕ್ ಹಾಗೂ ಮಲ್ಲೇಶ್ವರಂ ಸುತ್ತಮುತ್ತಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಹಲವು ಕಡೆಗಳಲ್ಲಿ ಮರಗಳು ಬಿದ್ದು ವಾಹನಗಳು ಜಖಂಗೊಂಡಿರುವ ಘಟನೆಗಳು ನಡೆದಿದೆ.

ಶಿವಾನಂದ ವೃತ್ತದ ಬಳಿಯ ಕ್ರೆಸೆಂಟ್ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದೆ. ಮರ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಕಾರುಗಳು ಹಾಗೂ ಬೈಕ್‌ಗಳು ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಶಾಂತಿನಗರ, ಕೋರಮಂಗಲ, ರಾಜಾಜಿನಗರ, ಜೆಪಿ ನಗರ, ಆರ್.ಟಿ ನಗರ, ಜಯನಗರ, ವಿಜಯನಗರ, ಶೇಷಾದ್ರಿಪುರಂ, ಶಿವಾಜಿನಗರ, ಬನಶಂಕರಿ, ಸದಾಶಿವನಗರ, ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಮೊದಲಾದ ಕಡೆ ಗಾಳಿ ಸಹಿತ ಮಳೆಯ ಅಬ್ಬರ ಮುಂದುವರಿದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.

ಸ್ಥಳಕ್ಕೆ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾದಲ್ಲಿ ತೊಡಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !