ಮುಸ್ಲಿಮ್ ಮಹಿಳೆಯರಿಗಾಗಿ ಹಜ್ ಕೋಟಾ ಹೆಚ್ಚಳ, ವೀಸಾ ಸರಳೀಕರಣ: ಇದು ಬಿಜೆಪಿ ಕೊಡುಗೆ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಜ್ ಕೋಟಾ ಹೆಚ್ಚಳ, ಮುಸ್ಲಿಮ್ ಮಹಿಳೆಯರಿಗೆ ಸುಲಭವಾಗಿ ಹಜ್ ಯಾತ್ರೆ, ವೀಸಾ ಸರಳೀಕರಣ ಸೇರಿದಂತೆ ಹಲವು ಕೊಡುಗೆಯನ್ನು ಬಿಜೆಪಿ ಮುಸ್ಲಿಮರಿಗೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಲಿಘಡದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಮೋದಿ ಮುಸ್ಲಿಮ್ ವಿರೋಧಿ ಎಂಬ ವಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ ಮುಸ್ಲಿಮ್ ಸಮುದಾಯಕ್ಕೆ ಅಗತ್ಯ ಹಾಗೂ ಅನಿವಾರ್ಯವಾಗಿ ಬೇಕಿದ್ದ ಮೂಲಭೂತ ಸೌಕರ್ಯಗಳನ್ನು ನೀಡಿದೆ. ತ್ರಿವಳಿ ತಲಾಕ್ ನಿಷೇಧಿಸುವ ಮೂಲಕ ಮುಸ್ಲಿಮ್ ಹೆಣ್ಣುಮಕ್ಕಳ ಜೀವನವನ್ನು ಹಸನಾಗಿಸುವ ಕೆಲಸ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಹಿಂದೆ ಹಜ್ ಯಾತ್ರೆ ತೆರಳುವುದು ಎಲ್ಲಾ ಮುಸ್ಲಿಮರಿಗೆ ಅಸಾಧ್ಯದ ಮಾತಾಗಿತ್ತು. ಕೇವಲ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುತ್ತಿತ್ತು. ಹಜ್ ಯಾತ್ರೆಗೆ ತೆರಳಲು ಲಂಚ ನೀಡಬೇಕಿತ್ತು. ಇಷ್ಟೇ ಅಲ್ಲ ಕೆಲವೇ ಕೆಲವು ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಸೌದಿ ಅರೆಬಿಯಾ ಪ್ರಿನ್ಸ್ ಜೊತೆಗಿನ ಮಾತುಕತೆಯಲ್ಲಿ ಭಾರತೀಯರ ಹಜ್ ಕೋಟಾವನ್ನು ಹೆಚ್ಚಳಕ್ಕೆ ಮನವಿ ಮಾಡಿದ್ದೆ. ಇದರ ಪರಿಣಾಮ ಭಾರತೀಯರ ಹಜ್ ಕೋಟಾ ಹೆಚ್ಚಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಕೇವಲ ಕೋಟಾ ಮಾತ್ರವಲ್ಲ, ವೀಸಾ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈ ಹಿಂದೆ ಮುಸ್ಲಿಮ್ ಮಹಿಳೆಯರು ಏಕಾಂಗಿಯಾಗಿ ಹಜ್ ಯಾತ್ರೆ ಕೈಗೊಳ್ಳುವಂತಿರಲಿಲ್ಲ. ಇದಕ್ಕೆ ಅವಕಾಶವಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ ಮೆಹ್ರಮ್ ಇಲ್ಲದೆ ಮುಸ್ಲಿಮ್ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.

ಮುಸ್ಲಿಮ್ ಹೆಣ್ಣಮಕ್ಕಳನ್ನು ತ್ರಿವಳಿ ತಲಾಖ್‌ನಿಂದ ರಕ್ಷಣೆ, ಹಜ್ ಯಾತ್ರೆ ಸೇರಿದಂತೆ ಮುಸ್ಲಿಮ್ ಸಮುದಾಯವನ್ನು ಮೇಲಕ್ಕೆತ್ತಲು ಬಿಜೆಪಿ ಸರ್ಕಾರ ಮಾಡಿದ ಯೋಜನೆಗಳಿಂದ ನನಗೆ ಹಲವು ಮುಸ್ಲಿಮ್ ಸಹೋದರಿಯರು ಆಶೀರ್ವಾದ ಮಾಡಿದ್ದಾರೆ. ಶುಭ ಹಾರೈಕೆಯನ್ನು ಕಳುಹಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!