ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಶನಿವಾರ ಗಾಜಾದ ಗಡಿ ಬೇಲಿ ತೆಗೆದು ಇಸ್ರೇಲ್‌ನತ್ತ ನುಗ್ಗಿದ್ದ ಹಮಾಸ್ ಉಗ್ರರು ಗಡಿಯ ಪುಟ್ಟ ಹಳ್ಳಿಗೆ ದಾಳಿ ನಡೆಸಿದ್ದು, ಈ ವೇಳೆ 40ಕ್ಕೂ ಅಧಿಕ ಮಕ್ಕಳ ಹತ್ಯೆಗೈದಿದ್ದಾರೆ.
ಸಾಕಷ್ಟು ಮಕ್ಕಳ ಶಿರಚ್ಛೇದ ಮಾಡಲಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದೆ. ಸ್ಥಳೀಯ ಇಸ್ರೇಲಿ ಮಾಧ್ಯಮ i24News ಪ್ರಕಾರ, ಇಸ್ರೇಲ್ ರಕ್ಷಣಾ ಪಡೆಗಳ ಸೈನಿಕರು ಶನಿವಾರ ಮುಂಜಾನೆ ಹಮಾಸ್ ಭಯೋತ್ಪಾದಕರು ದಾಳಿ ಮಾಡಿದ ಪ್ರದೇಶಗಳಲ್ಲಿ ಒಂದಾದ ಕಫ್ರ್ ಅಜಾಗೆ ತೆರಳಿದ್ದರು. ಅಲ್ಲಿ ಸುಮಾರು 40 ಶಿಶುಗಳ ಶವಗಳನ್ನು ಅವರು ಪತ್ತೆ ಮಾಡಿದ್ದಾರೆ. ಈ ವೇಳೆ ಹೆಚ್ಚಿನ ಮಕ್ಕಳ ಶಿರಚ್ಛೇದ ಮಾಡಲಾಗಿದೆ. ಇದು ಹಮಾಸ್ ಉಗ್ರರ ಕ್ರೂರತೆಗೆ ಸಾಕ್ಷಿಯಾಗಿದೆ ಎಂದು ಇಸ್ರೇಲ್ ಹೇಳಿದೆ.
ಖಂಡಿತಾ ಇದು ಯುದ್ಧವಲ್ಲ. ಇದು ಯುದ್ಧಭೂಮಿಯೂ ಅಲ್ಲ. ಇಲ್ಲಿ ನೀವು ಶಿಶುಗಳು, ತಾಯಿ, ತಂದೆ, ಅವರ ಬೆಡ್‌ರೂಮ್‌ಗಳಲ್ಲಿ, ಬಾಂಬ್ ಶೆಲ್ಟರ್‌ಗಳಲ್ಲಿ ಭಯೋತ್ಪಾದಕವರು ಎಷ್ಟು ಅಮಾನುಷವಾಗಿ ಕೊಂದಿದ್ದಾರೆ ಅನ್ನೋದನ್ನು ನೋಡುತ್ತಿದ್ದೀರಿ’ ಎಂದು ಐಡಿಎಫ್‌ನ ಮೇಜರ್ ಜನರಲ್ ಇಟಾಯ್ ವೆರುವ್ ಹೇಳಿದ್ದನ್ನು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ.ಇದು ಬರೀ ಯುದ್ಧಪರಾಧವಲ್ಲ, ಇದು ಹತ್ಯಾಕಾಂಡ ಎಂದು ಅವರು ಕರೆದಿದ್ದಾರೆ.
ಇಸ್ರೇಲ್‌ನಲ್ಲಿ ಪ್ರಜೆಗಳು ಮಲಗಿದ್ದ ಸಮಯದಲ್ಲಿ ರಾಕೆಟ್ ದಾಳಿ ಮಾಡಿದ್ದ ಹಮಾಸ್ ಉಗ್ರರು, ಗಾಜಾಪಟ್ಟಿಯ ಸನಿಹದಲ್ಲಿ ಗಡಿಯ ಬೇಲಿಗಳನ್ನು ಮುರಿದು ಉಗ್ರ ಕೃತ್ಯ ನಡೆಸಿದ್ದರು. ಇಸ್ರೇಲಿ ಜನರನ್ನು ಬೀದಿಯಲ್ಲಿ ಎಳೆದಿದ್ದು ಮಾತ್ರವಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರ್‌ಗಳನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದರು. ಅದಲ್ಲದೆ, ಸಾಕಷ್ಟು ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 700 ಕ್ಕೂ ಹೆಚ್ಚು ಇಸ್ರೇಲಿಗಳು ಒಂದೇ ದಿನದಲ್ಲಿ ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಟ್ಟರು – ಇಸ್ರೇಲ್‌ನ ಇತಿಹಾಸದಲ್ಲಿ ಒಂದೇ ದಿನದಲ್ಲಿ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿತ್ತು.