ಹೊಸದಿಗಂತ ವರದಿ,ವಿಜಯನಗರ:
ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಜ.27, 28 ಹಾಗೂ 29 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಂಪಿ ಉತ್ಸವದ ಲೋಗೊ ವನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಜ.27, 28 ಹಾಗೂ 29 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ನಾಡಿನ ಎಲ್ಲ ಕಲಾವಿಧರು ಆಗಮಿಸಲಿದ್ದು, ವಿಜಯನಗರದ ಗತವಭವ ಮತ್ತೆ ಮರುಕಳಿಸುವ ರೀತಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಂಪಿ ಉತ್ಸವವನ್ನು ಆಚರಿಸಲಾಗುವುದು. ನಮ್ಮ ಡಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಹಂಪಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ, ಪ್ರವಾಸಿಗರ ಅನುಕೂಲಕ್ಕಾಗಿ ಹಾಗೂ ಸ್ಮಾರಕಗಳ ರಕ್ಷಣೆಗೆ ಸಂಬಂಧಿಸಿದಂತೆ ನಾನಾ ಯೋಜನೆಗಳನ್ನು ಹಾಗೂ ಸೌಲಭ್ಯ ಕಲ್ಪಿಸಲು ಕೋಟ್ಯಾಂತರ ರೂ.ಅನುದಾನ ಹರಿದು ಬಂದಿದೆ. ಹಂಪಿ ಉತ್ಸವ ಸಂಬಂಧಿಸಿದಂತೆ ಸಿದ್ದತೆಗಳು ಭರದಿಂದ ಸಾಗಿದ್ದು, ಇದೊಂದು ಜನೋತ್ಸವವಾಗಲಿದೆ. ಪ್ರತಿಯೊಬ್ಬರೂ ಈ ಹಂಪಿ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಬೇಕು, ಇದು ನಮ್ಮನಿಮ್ಮೆಲ್ಲರ ಹಬ್ಬವಿದ್ದಂತೆ ಎಂದರು.