Friday, March 24, 2023

Latest Posts

ಪುದುಚೇರಿಯಲ್ಲಿ ಯಶಸ್ವಿಯಾಗಿ ಹಾರಿತು ಬೆಂಗಳೂರಿನ ‘ಹಂಸ’!

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನ ಆಶ್ರಯದಲ್ಲಿ ಬೆಂಗಳೂರಿನ ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ಭಾರತದ ಮೊದಲ ಸ್ವದೇಶಿ ಫ್ಲೈಯಿಂಗ್ ಟ್ರೈನರ್ ಹಂಸ-ಎನ್‌ಜಿ ಫೆ. 19ರಿಂದ ಮಾ. 5ರವರೆಗೆ ಪುದುಚೇರಿಯಲ್ಲಿ ಸಮುದ್ರ ಮಟ್ಟದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಫೆ. 19ರಂದು ವಿಮಾನ ತಾಸಿಗೆ 155 ಕಿ.ಮೀ. ವೇಗದಲ್ಲಿ 140 ನಾಟಿಕಲ್ ಮೈಲುಗಳನ್ನು ಒಂದುವರೆ ತಾಸಿನಲ್ಲಿ ಕ್ರಮಿಸಿ ಪುದುಚೇರಿಗೆ ತಲುಪಿತು. ಮಾ. 5ರಂದು ಪುದುಚೇರಿಯಲ್ಲಿ 18 ತಾಸುಗಳ ಹಾರಾಟವನ್ನು ಪೂರ್ಣಗೊಳಿಸಿದ ನಂತರ ವಿಮಾನವನ್ನು ಬೆಂಗಳೂರಿಗೆ ಹಿಂತಿರುಗಿಸಲಾಗಿದೆ ಎಂದು ಸಿಎಸ್‌ಐಆರ್-ಎನ್‌ಎಎಲ್ ಮೂಲಗಳು ತಿಳಿಸಿವೆ.

ನಿರ್ವಹಣೆಯ ಗುಣಗಳನ್ನು ಮೌಲ್ಯಮಾಪನ ಮಾಡುವುದು, ಆರೋಹಣ / ಕ್ರೂಸ್ ಕಾರ್ಯಕ್ಷಮತೆ, ಬಾಲ್ಕಡ್ ಲ್ಯಾಂಡಿಂಗ್, ರಚನಾತ್ಮಕತೆ, ಪಾಸಿಟಿವ್ ಆ್ಯಂಡ್ ನೆಗೆಟಿವ್ ಜಿ, ವಿದ್ಯುತ್ ಸ್ಥಾವರ ಮತ್ತು ಇತರ ಸಿಸ್ಟಮ್ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಕಾರ್ಯಕ್ಷಮತೆ ಪರೀಕ್ಷಿಸುವುದು ಸಮುದ್ರ ಮಟ್ಟದ ಪ್ರಯೋಗಗಳ ಉದ್ದೇಶಗಳಾಗಿವೆ. ಈ ಎಲ್ಲಾ ಉದ್ದೇಶಗಳನ್ನು ಹಂಸ-ಎನ್‌ಜಿ ಪೂರೈಸಿದೆ.

ಎಎಸ್ ಟಿಇಯ ವಿಂಗ್ ಕಮಾಂಡರ್ ಕೆ.ವಿ. ಪ್ರಕಾಶ್ ಮತ್ತು ವಿಂಗ್ ಕಮಾಂಡರ್ ದಿಲೀಪ್ ರೆಡ್ಡಿ ವಿಮಾನದ ಪೈಲಟ್‌ಗಳಾಗಿದ್ದರು. ವಿಮಾನವನ್ನು ಸಿಎಸ್‌ಐಆರ್-ಎನ್‌ಎಎಲ್‌ನ ವಿನ್ಯಾಸಕರು ಮೇಲ್ವಿಚಾರಣೆ ಮಾಡಿದರು. ವಿಂಗ್ ಕಮಾಂಡರ್ ರೀಜು ಚಕ್ರವರ್ತಿ ಟೆಲಿಮೆಟ್ರಿಯಿಂದ ಫ್ಲೈಟ್ ಟೆಸ್ಟ್ ಡೈರೆಕ್ಟರ್ ಆಗಿದ್ದರು.

ಜಸ್ಟ್-ಇನ್-ಟೈಮ್ ಪ್ರಿಪ್ರೆಗ್ (JIPREG) ಕಾಂಪೋಸಿಟ್ ಲೈಟ್ ವೇಟ್ ಏರ್‌ ಫ್ರೇಮ್, ಗ್ಲಾಸ್ ಕಾಕ್‌ಪಿಟ್, ವಿಶಾಲವಾದ ವಿಹಂಗಮ ನೋಟದೊಂದಿಗೆ ಬಬಲ್ ಕೆನೊಪಿ, ವಿದ್ಯುತ್ ಚಾಲಿತ ಫ್ಲಾಪ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ರೋಟಾಕ್ಸ್ ಡಿಜಿಟಲ್ ಕಂಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿರುವ ಹಂಸ-ಎನ್‌ಜಿ ಅತ್ಯಾಧುನಿಕ ಫ್ಲೈಯಿಂಗ್ ಟ್ರೈನರ್‌ಗಳಲ್ಲಿ ಒಂದಾಗಿದೆ.

ಭಾರತೀಯ ಫ್ಲೈಯಿಂಗ್ ಕ್ಲಬ್ ಅಗತ್ಯಗಳನ್ನು ಪೂರೈಸಲು ಹಂಸ-ಎನ್‌ಜಿ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ಕಡಿಮೆ ವೆಚ್ಚ ಮತ್ತು ಕಡಿಮೆ ಇಂಧನ ಬಳಕೆಯಿಂದಾಗಿ ವಾಣಿಜ್ಯ ಪೈಲಟ್ ಪರವಾನಗಿಗೆ ಇದು ಸೂಕ್ತವಾದ ವಿಮಾನವಾಗಿದೆ ಎಂದು ಸಿಎಸ್‌ಐಆರ್-ಎನ್‌ಎಎಲ್ ಹೇಳಿದೆ. ಎನ್‌ಎಎಲ್ ಈಗಾಗಲೇ 80ಕ್ಕೂ ಹೆಚ್ಚು ವಿವಿಧ ಫ್ಲೈಯಿಂಗ್ ಕ್ಲಬ್‌ಗಳಿಂದ ಲೆಟರ್ ಆಫ್ ಇಂಟೆಂಟ್ಸ್ ಸ್ವೀಕರಿಸಿದೆ.

ಒಟ್ಟು 37 ವಿಮಾನಗಳು ಮತ್ತು 50 ತಾಸುಗಳ ಹಾರಾಟವನ್ನು ಪೂರ್ಣಗೊಳಿಸಿವೆ. ಡಿಜಿಸಿಎಯಿಂದ ಪ್ರಮಾಣೀಕರಣವನ್ನು ಪಡೆಯುವ ಮೊದಲು ಇನ್ನೂ ಕೆಲವು ವಿಮಾನಗಳ ಹಾರಾಟವನ್ನು ನಡೆಸಲಾಗುವುದು. ಟೈಪ್ ಸರ್ಟಿಫೀಕೇಶನ್ ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಂತರ ಸಾರ್ವಜನಿಕ / ಖಾಸಗಿ ಉದ್ಯಮದೊಂದಿಗೆ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು. ಇದು ಆತ್ಮನಿರ್ಭರ ಭಾರತ್ ಅಡಿಯಲ್ಲಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಎಂದು ಸಿಎಸ್‌ಐಆರ್-ಎನ್‌ಎಎಲ್ ನಿರ್ದೇಶಕರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!