ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 11 ದಿನಗಳಿಂದ ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುತ್ತಿದೆ. ರಷ್ಯಾದ ದರ್ಪಕ್ಕೆ ಮಣಿಯದ ಉಕ್ರೇನ್ ಸಮಬಲದಲ್ಲಿ ಹೋರಾಡುತ್ತಿರುವುದನ್ನು ಕಂಡು ವಿಶ್ವವೇ ಪ್ರಶಂಸೆ ವ್ಯಕ್ತಪಡಿಸುತ್ತಿದೆ.
ಯುದ್ಧದ ಬಗ್ಗೆ ಮಾಹಿತಿ ನೀಡಿದ ಉಕ್ರೇನ್ ಸೇನೆ, ಈವರೆಗೆ ಉಕ್ರೇನ್ ನಲ್ಲಿ ರಷ್ಯಾದ 11 ಸಾವಿರ ಸೈನಿಕರನ್ನು ಹೊಡೆದುರುಳಿಸಲಾಗಿದೆ. ಜತೆಗೆ ರಷ್ಯಾದ 44 ಸೇನಾ ವಿಮಾನಗಳು, 48 ಸೇನಾ ಹೆಲಿಕಾಪ್ಟರ್ ಗಳು, 50 ರಾಕೆಟ್, 285 ಯುದ್ಧ ಟ್ಯಾಂಕರ್ ಸೇರಿ 985 ಸೇನಾ ವಾಹನಗಳನ್ನು ಧ್ವಂಸ ಮಾಡಲಾಗಿದೆ ಎಂದು ತಿಳಿಸಿದೆ.
ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ನಲ್ಲಿರುವ ನಾಗರಿಕರನ್ನು ನೆರೆ ರಾಷ್ಟ್ರಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಉಕ್ರೇನ್ ನ ಮಾರಿಯುಪೋಲ್ ಮತ್ತು ವೊಲ್ನೋವಾಖಾದಿಂದ ಸುಮಾರು 4 ಲಕ್ಷ ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಉಕ್ರೇನ್ ನಿಂದ ಪಾರಾದ ಜನರು ಪೊಲೆಂಡ್, ರೊಮೇನಿಯಾ, ಸ್ಲೋವಾಕಿಯಾ ಮತ್ತು ಇತರೆ ರಾಷ್ಟ್ರಗಳಿಗೆ ಪಲಾಯನಗೊಳ್ಳುತ್ತಿದ್ದಾರೆ. ಈವರೆಗೆ ಸುಮಾರು 1.5 ಮಿಲಿಯನ್ ಜನ ಉಕ್ರೇನ್ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ.
ಉಕ್ರೇನ್ ಜತೆಗೆ ವಿಶ್ವದ ದೊಡ್ಡಣ್ಣ ಅಮೆರಿಕ ಬೆನ್ನೆಲುಬಾಗಿ ನಿಂತಿದ್ದು, ರಷ್ಯಾ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರಲು ಸಜ್ಜಾಗಿದೆ. ಉಕ್ರೇನ್ ಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಹಾಗೂ 10 ಬಿಲಿಯನ್ ಡಾಲರ್ ತುರ್ತು ನೆರವು ನೀಡುವುದಾಗಿ ಜೊ ಬಿಡೆನ್ ಸರ್ಕಾರ ತಿಳಿಸಿದೆ.