ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಹಂಸಿಕಾ ಮೋಟ್ವಾನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದು, ಪತಿ ಸೋಹೈಲ್ ಕತುರಿಯಾ ಜೊತೆಗಿನ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮದುವೆಯ ನಾಲ್ಕೇ ವರ್ಷಗಳೊಳಗೆ ಬೇರ್ಪಟ್ಟ ಈ ಜೋಡಿ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಅವರು ಪರೋಕ್ಷವಾಗಿ ಉತ್ತರ ನೀಡಿದ್ದಾರೆ.
ವಿಚ್ಛೇದನದ ಹಿಂದೆ ಹಲವು ಊಹಾಪೋಹಗಳು ಹರಿದಾಡಿದರೂ, ಇಷ್ಟು ದಿನ ಮೌನವಾಗಿದ್ದ ಹನ್ಸಿಕಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಕೇವಲ ಸುದ್ದಿಯ ಶೀರ್ಷಿಕೆಗಳಿಗಾಗಿ ಕಥೆಗಳನ್ನು ನಿರ್ಮಿಸುತ್ತಾರೆ, ಆದರೆ ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯ ನನಗೆ ಕಾಣಿಸಲಿಲ್ಲ ಎಂದು ಹೇಳಿದ್ದಾರೆ.
ತಪ್ಪಾದ ನಿರ್ಧಾರದಲ್ಲಿ ಮುಂದುವರಿಯುವುದಕ್ಕಿಂತ ಅದರಿಂದ ಹೊರಬರುವುದು ಉತ್ತಮ ಎಂಬ ಸಂದೇಶವನ್ನು ಅವರು ನೀಡಿದರು. ಯಾರಾದರೂ ತಪ್ಪಾಗಿ ರೈಲಿಗೆ ಏರಿದರೆ, ಅದರಲ್ಲಿ ಮುಂದುವರಿಯುವುದಕ್ಕಿಂತ ಇಳಿಯುವುದು ಸರಿಯಾದ ನಿರ್ಧಾರ ಎಂಬ ರೂಪಕದ ಮೂಲಕ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕುಟುಂಬದ ಬೆಂಬಲವೇ ಈ ಸಮಯದಲ್ಲಿ ನನಗೆ ದೊಡ್ಡ ಶಕ್ತಿ ನೀಡಿತು ಎಂದು ಹೇಳಿದ ಅವರು, ತಮ್ಮ ನೋವುಗಳನ್ನು ಕುಟುಂಬದವರು ಸಮೀಪದಿಂದ ಕಂಡಿದ್ದರು ಎಂದು ಹೇಳಿದರು. ಸರಿಹೊಂದದ ಸಂಬಂಧದಲ್ಲಿ ಉಳಿಯುವುದಕ್ಕಿಂತ ಹೊರಬರಲು ಅವರು ಸಲಹೆ ನೀಡಿದ್ದರು ಎಂದು ಹಂಚಿಕೊಂಡರು.
ತಮ್ಮ ಮತ್ತು ಸೋಹೈಲ್ ನಡುವಿನ ಸಮಸ್ಯೆಗಳ ಬಗ್ಗೆ ವಿವರಿಸಲು ಅವರು ನಿರಾಕರಿಸಿದ್ದು, ಅದು ವೈಯಕ್ತಿಕವಾಗಿಯೇ ಉಳಿಯಬೇಕು ಎಂದು ತಿಳಿಸಿದ್ದಾರೆ. ಪ್ರಸ್ತುತ ತಮ್ಮ ಜೀವನದಲ್ಲಿ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ.



