Wednesday, June 29, 2022

Latest Posts

ಮೇ.9ಕ್ಕೆ ಸಾವಿರ ದೇಗುಲಗಳಲ್ಲಿ ಹನುಮಾನ್‌ ಚಾಲೀಸಾ ಪಠಣ: ಪ್ರಮೋದ್ ಮುತಾಲಿಕ್

ಹೊಸದಿಗಂತ ವರದಿ, ಕುಶಾಲನಗರ
ಹಿಜಾಬ್ ಪ್ರಕರಣದಿಂದ ರಾಜ್ಯದಲ್ಲಿ ದೊಡ್ಡ ಮಟ್ಟದ ಚಿಂತನ ಮಂಥನ ಉಂಟಾಗಿದ್ದು ಹಿಂದೂ ಸಮಾಜ ಜಾಗೃತವಾಗುತ್ತಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಎಡವಿರುವ ಹಿಂದೂ ಸಮಾಜ ಸುಧಾರಿಸಿಕೊಳ್ಳುತ್ತಿದೆ. ಇಲ್ಲಿವರೆಗಿನ ಹಿಂದೂ ಸಂಘಟನೆಗಳ ಜಾಗೃತಿ ಹೋರಾಟ ಯಶಸ್ವಿಯಾಗಿದೆ. ಮುಂದೆ ವಕ್ಛ್ ಬೋರ್ಡ್ ಗೋಲ್ಮಾಲ್, ಆಜಾನ್ ಮೈಕ್ ಕಿರಿಕಿರಿ, ಗೋಹತ್ಯೆ, ಬೈಬಲ್ ಬೋಧನೆ ವಿರೋಧಿ ಹೋರಾಟ ಮತ್ತು ಮತಾಂತರ‌ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಹೋರಾಟ ಮುಂದುವರೆಯಲಿದೆ. ಮೈಸೂರು ಜಿಲ್ಲೆಯ ಕೌವಲಂದೆ ಎಂಬಲ್ಲಿ ರಂಜಾನ್ ಮೆರವಣಿಗೆ ಸಂದರ್ಭ ಛೋಟಾ ಪಾಕಿಸ್ತಾನ ಎಂಬ ಹೇಳಿಕೆಗಳು ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಹಿಂದೂ ಸಮಾಜವನ್ನು ಇಂದಿಗಿಂತ ಇನ್ನೂ 100 ಪಟ್ಟು ಹೆಚ್ಚು ಜಾಗೃತಿಗೊಳಿಸುವ ಅಗತ್ಯವಿದೆ ಎಂದು ಮುತಾಲಿಕ್ ನುಡಿದರು.
ಹನುಮಾನ್ ಚಾಲಿಸ ಪಠಣ:
ಆಜಾನ್’ನಿಂದ ಉಂಟಾಗುವ ಶಬ್ಧ ಮಾಲಿನ್ಯ, ಸುಪ್ರೀಂ ತೀರ್ಪು ಉಲ್ಲಂಘನೆ ವಿರೋಧಿಸಿ 9 ರಂದು ರಾಜ್ಯದ ಒಂದು ಸಾವಿರ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಹಿಂದೂ ಸಂಘಟನೆಗಳಿಂದ ಸುಪ್ರಭಾತ, ಓಂಕಾರ, ಶಿವನಾಮ‌ ಜಪ, ಹನುಮಾನ್ ಚಾಲಿಸ ಪಠಣ ನಡೆಯಲಿದೆ ಎಂದು ಅವರು ಇದೇ‌ ಸಂದರ್ಭ ತಿಳಿಸಿದರು.
ರಾಜಕೀಯ ಸ್ವಾರ್ಥದಿಂದ ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗುತ್ತಿದೆ. ಬಿಜೆಪಿ ಸರಕಾರ ಇದ್ದರೂ ಕೂಡಾ ಎಸ್’ಡಿಪಿಐ, ಪಿಎಫ್’ಐ ಸಂಘಟನೆಗಳ ನಿಷೇಧ ಸಾಧ್ಯವಾಗದಿರುವ ಹಿಂದೆ ಹೀನ ರಾಜಕಾರಣವಿದೆ. ಇಸ್ಲಾಂ ಕ್ರೌರ್ಯಕ್ಕೆ ಕಡಿವಾಣ ಹಾಕಲು ಈ ಎರಡು ಸಂಘಟನೆಗಳ ನಿಷೇಧ ಅವಶ್ಯಕವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಭಯೋತ್ಪಾದಕರನ್ನು ಬೆಳೆಸಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತ ಹಿಂದೂ ಸಮಾಜಕ್ಕೆ ಪೂರಕವಾದ ಕೆಲವೊಂದು ಕಾಯ್ದೆ, ಕಾನೂನು, ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಇದು ತೃಪ್ತಿದಾಯಕವಲ್ಲ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸರಕಾರ ಮತ್ತು ಪೊಲೀಸ್ ಇಲಾಖೆ ವೈಫಲ್ಯದಿಂದ ಗೋಕಳ್ಳತನ, ಹತ್ಯೆ, ಮಾರಾಟ ಅಕ್ರಮ ದಂಧೆ ಎಗ್ಗಿಲ್ಲದೆ‌ ಮುಂದುವರೆದಿದೆ. ಈ ಸಂಬಂಧ ಟಾಸ್ಕ್ ಫೋರ್ಸ್ ರಚನೆ, ವಿಶೇಷ ಚೆಕ್ ಪೋಸ್ಟ್, ಪೊಲೀಸ್ ಠಾಣಾಧಿಕಾರಿಗಳಿಗೆ ವಿಶೇಷ ನಿರ್ದೇಶನ‌ ಸೇರಿದಂತೆ 10 ಪ್ರಶ್ನೆಗಳನ್ನು ಪಶುಸಂಗೋಪನಾ ಸಚಿವರ ಮುಂದಿಡಲಾಗುವುದು ಎಂದು ತಿಳಿಸಿದರು.
ಹಲವೆಡೆ ಪ್ರಮೋದ್ ಮುತಾಲಿಕ್ ಅವರಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ತಡೆಯುವ ಮೂಲಕ ಹಿಂದುತ್ವಕ್ಕೆ, ಸಂವಿಧಾನಕ್ಕೆ, ಸ್ವಾತಂತ್ರ್ಯಕ್ಕೆ ಬಿಜೆಪಿ ತಡೆಯೊಡ್ಡುತ್ತಿದೆ. ಹಿಂದೂಗಳ ಮಾನಸಿಕತೆ ಕುಗ್ಗಿಸಲಾಗುತ್ತಿದೆ ಎಂದು ದೂರಿದ ಅವರು, ಇಂತಹ ಪ್ರಕ್ರಿಯೆಗಳನ್ನು‌ ನಿಲ್ಲಿಸದಿದ್ದಲ್ಲಿ ಹಿಂದೂ ಸಮಾಜ‌ ಭುಗಿಲೆದ್ದು ಬಿಜೆಪಿಯನ್ನು ಧೂಳಿಪಟ ಮಾಡಲಿದೆ ಎಂದು ಮುತಾಲಿಕ್ ಎಚ್ಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss