ಹೊಸದಿಗಂತ ವರದಿ ಬೆಳಗಾವಿ:
ಇಲ್ಲಿನ ತಹಶಿಲ್ದಾರ್ ಕಚೇರಿಯಲ್ಲಿನ ದ್ವಿತೀಯ ದರ್ಜೆ ಸಹಾಯಕನೊಬ್ಬ ತಹಶೀಲ್ದಾರ್ ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿಯೇ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾಗಿದ್ದು, ತಹಶೀಲ್ದಾರ್ ಬಸವರಾಜ ನಾಗರಾಳ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ಕಿರುಕುಳ ಕಾರಣ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಿರಿಯ ಅಧಿಕಾರಿಗಳು ಇರುವ ವ್ಯಾಟ್ಸಪ್ ಗ್ರುಪ್ ನಲ್ಲಿ ಬೇಳಿಗ್ಗೆ ಮೆಸೆಜ್ ಮಾಡುವ ಮೂಲಕ ತಹಶೀಲ್ದಾರ್ ಹಾಗೂ ಸಚಿವೆ ಹೆಬ್ಬಾಳಕರ ಆಪ್ತ ಸಹಾಯಕ ಸೋಮು ಎಂಬಾತನ ಹೆಸರು ಉಲ್ಲೇಖಿಸಿದ್ದಾನೆ.
ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಮತ್ತು ಸೋಮುನ ಕಿರುಕಳ ಕಾರಣ ಎನ್ನಲಾಗಿದೆ. ಅಲ್ಲದೇ ರುದ್ರಣ್ಣ ಅವರಿಗೆ ಬೆಳಗಾವಿ ತಹಶಿಲ್ದಾರರ ಕಚೇರಿಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಅಡಳಿತ ಮಂಡಳಿಗೆ ನಿನ್ನೆಯೇ ಜಿಲ್ಲಾಧಿಕಾರಿಗಳು ವರ್ಗಾವಣೆ ಮಾಡಿದ್ದರು. ತನ್ನ ವರ್ಗಾವಣೆ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ರುದ್ರಣ್ಣ ಬರೆದುಕೊಂಡು ತಹಶಿಲ್ದಾರರ ಕಚೇರಿಯ ವಾಟ್ಸಪ್ ಗ್ರೂಪ್ ನಲ್ಲಿಯೂ ಚರ್ಚೆ ನಡೆಸಿ ಬಳಿಕ ಅದನ್ನು ಡಿಲಿಟ್ ಮಾಡಿದ್ದ ಎನ್ನುವ ಮಾಹಿತಿ ಇದ್ದು ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.