ಬೆಂಗಳೂರಿನಲ್ಲಿ ಡ್ರಿಂಕ್‌& ಡ್ರೈವ್‌ಗೆ ಮಹಿಳೆ ಬಳಿ: ಕೋಟಿ ಕೋಟಿ ಕೊಟ್ಟು ಕೇಸ್‌ ಹಾಕ್ಬೇಡಿ ಎಂದ ಮಾಲೀಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಗೆ ಮತ್ತೊಂದು ಬಲಿಯಾಗಿದ್ದು, 30 ವರ್ಷದ ಸಂಧ್ಯಾ ಎಂಬ ಮಹಿಳೆ ದುರಂತ ಅಂತ್ಯಕಂಡಿದ್ದಾರೆ.

ಬೆಂಗಳೂರಿನ ಕೆಂಗೇರಿ ಬಸ್ ನಿಲ್ದಾಣದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಡೀ ಸಿಲಿಕಾನ್ ಸಿಟಿ ಜನರನ್ನೇ ಬೆಚ್ಚಿ ಬೀಳಿಸಿದೆ. ಸಣ್ಣದೊಂದು ತಪ್ಪು ಮಾಡದ 30 ವರ್ಷದ ಟೆಕ್ಕಿ ಸಂಧ್ಯಾ ಅವರ ಮೇಲೆ ಕುಡಿದು ಬೆನ್ಜ್‌ ಕಾರು ಓಡಿಸುತ್ತಿದ್ದವರು ಅಟ್ಟಹಾಸ ಮೆರೆದಿದ್ದು ಕಾರು ಗುದ್ದಿದ ರಭಸಕ್ಕೆ ಸಂಧ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ ಭಾನುವಾರ ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಗೆಳೆಯರು ಕುಡಿದು ಬೆನ್ಜ್‌ ಕಾರು ಚಾಲನೆ ಮಾಡುತ್ತಿದ್ದರು. ಆರೋಪಿ ಧನುಷ್ ಹಾಗೂ ಗೆಳೆಯರು ಭರ್ಜರಿ ಪಾರ್ಟಿ ಮುಗಿಸಿ ರೋಡ್‌ನಲ್ಲಿ ವೇಗದಲ್ಲಿ ಡ್ರೈವಿಂಗ್ ಮಾಡುತ್ತಿದ್ದರು. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದರು. ಸ್ಪೀಡಾಗಿ ಬರ್ತಿದ್ದ ಬೆನ್ಜ್ ಕಾರು ಟೆಕ್ಕಿ ಸಂಧ್ಯಾಗೆ ಗುದ್ದಿದೆ. ಬೆನ್ಜ್ ಕಾರು ಗುದ್ದಿದ ರಭಸಕ್ಕೆ ಮೇಲೆ ಹಾರಿದ ಸಂಧ್ಯಾ ಅವರ ದೇಹವೇ ನುಜ್ಜುಗುಜ್ಜಾಗಿದೆ.

ಇನ್ನು ಸಂಧ್ಯಾ ಅವರು ತನ್ನ ಕೆಲಸ ಮುಗಿಸಿ ಮನೆಗೆ ಹೊರಟಿದ್ದು ಕೆಂಗೇರಿ ಬಸ್ ನಿಲ್ದಾಣ ಬಳಿ ಈ ಅಪಘಾತ ನಡೆದಿದೆ. ಅಪಘಾತದ ಬಳಿಕ ಸಂಧ್ಯಾ ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸಂಧ್ಯಾ ಸ್ನೇಹಿತರು, ಸ್ಥಳೀಯರು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಂಧ್ಯಾ ಒಬ್ಬರಿಗೇ ಅಲ್ಲ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆನ್ಜ್‌ ಕಾರು ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸೈಯ್ಯದ್ ಎಂಬ ವ್ಯಕ್ತಿಗೂ ಗಾಯಗಳಾಗಿದ್ದು, ಕುಡಿದ ಮತ್ತಲ್ಲಿ ಅತಿವೇಗವಾಗಿ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.

ಇನ್ನು ಸಂಧ್ಯಾ ಅವರ ದುರಂತ ಸಾವಿಗೆ ಸಂಬಂಧಿಸಿದಂತೆ ಸಂಧ್ಯಾ ಸಹೋದರ ಪೊಲೀಸ್ ದೂರು ದಾಖಲಿಸಿದ್ದು, ಇದೀಗ ಕೇಸ್ ವಾಪಸ್ ಪಡೆಯುವಂತೆ ಆರೋಪಿ ಧನುಷ್ ಸಂಬಂಧಿಕರು ಕೋಟಿ ಕೋಟಿ ಆಫರ್ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ ಕಾರು ಚಲಾಯಿಸುತ್ತಿದ್ದ ಆರೋಪಿ ಧನುಷ್ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುವವರ ಒಬ್ಬನೇ ಪ್ರೀತಿಯ ಪುತ್ರ.

ಸಂಧ್ಯಾಗೆ ಗುದ್ದಿರುವ ಬೆಂಜ್ ಕಾರು LV ಟ್ರಾವೆಲ್ಸ್‌ಗೆ ಸೇರಿದ್ದು ಎನ್ನಲಾಗಿದೆ. ಟ್ರಾವೆಲ್ಸ್ ಮಾಲೀಕರಾಗಿರುವ ಪರಮಶಿವಯ್ಯ ಅವರು ಅತ್ಯಂತ ಪ್ರೀತಿಯಿಂದ ಒಬ್ಬನೇ ಮಗನನ್ನು ಬೆಳೆಸಿದ್ದಾರೆ. ಅದೇ ಮಮತೆಯಲ್ಲಿ ಐಷಾರಾಮಿ ಬೆಂಜ್ ಕಾರನ್ನು ಕೊಡಿಸಿದ್ದಾರೆ. ಇದೇ ಕಾರು ಇದೀಗ ಅಪಘಾತ ಮಾಡಿದೆ.

ಇದೀಗ ಕಾರು ಮಾಲೀಕರ ಕಡೆಯವರು ಬಂದು ಎಫ್ಐಆರ್ ಮಾಡಬೇಡಿ. ದುಡ್ಡು ಕೊಡ್ತೀವಿ ಅಂತಾ ಹೇಳಿದ್ದರು. ನಮಗೆ ದುಡ್ಡು ಬೇಡ, ಸಂಧ್ಯಾ ಬೇಕು. ಈ ಘಟನೆ ಬಗ್ಗೆ ಎಲ್ಲಾ ತಿಳಿದುಕೊಂಡು ಪೊಲೀಸ್​ ಠಾಣೆಗೆ ಹೋಗಿ ಎಫ್​ಐಆರ್​ ಹಾಕಲು ಮುಂದಾಗಿದ್ದೆವು. ಆದರೆ ಅಲ್ಲಿ ಎಫ್​ಐಆರ್​ ಹಾಕೋದಕ್ಕೆ ಹಿಂದೇಟು ಹಾಕಿದ್ದು, ಬಳಿಕ ಎಫ್​ಐಆರ್​ ದಾಖಲು ಮಾಡಿಕೊಂಡ್ರು ಅಂತ ಸಂಧ್ಯಾ ಸಹೋದರ ಹೇಳಿದ್ದಾರೆ. ಅಲ್ಲದೆ ಆತ ಶೋಕಿಯಲ್ಲಿ ಕುಡಿದು ಕಾರು ಓಡಿಸಿ ನಮ್ಮ ಅಕ್ಕನ ಜೀವ ತೆಗೆದಿದ್ದಾನೆ. ಅವರಿಗೆ ಶಿಕ್ಷೆ ಆಗಲೇಬೇಕು ಅಂತ ಕಣ್ಣೀರು ಹಾಕಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!