2008 ರಲ್ಲಿ ಶ್ರೀಶಾಂತ್‌ ಗೆ ‌ʼಕಪಾಳಮೋಕ್ಷʼ ಮಾಡಿದ್ದಕ್ಕೆ ಈಗ ಕ್ಷಮೆ ಕೇಳಿದ ಹರ್ಭಜನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಉದ್ಘಾಟನಾ ಆವೃತ್ತಿಯ ಸಂದರ್ಭದಲ್ಲಿ ನಡೆದಿದ್ದ ‘ಕಪಾಳಮೋಕ್ಷ’ ಘಟನೆಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ವೇಗಿ ಎಸ್.ಶ್ರೀಶಾಂತ್‌ ಅವರಬಳಿ ಕ್ಷಮೆಯಾಚಿಸಿದ್ದಾರೆ.
ಐಪಿಎಲ್‌ ಮೊದಲ ಆವೃತ್ತಿಯಲ್ಲಿ ಅಂತಹದ್ದೊಂದು ನಡೆಯಬಾರದ ಘಟನೆ ನಡೆದಿತ್ತು. ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ವಿರುದ್ಧ‌ ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಖಾಯಂ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸುತ್ತಿದ್ದರು. ಈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುಂಬೈ 66 ರನ್‌ಗಳಿಂದ ಮುಖಭಂಗ ಅನುಭವಿಸಿತ್ತು. ಪಂದ್ಯದುದ್ದಕ್ಕೂ ಆಕ್ರಮಣಕಾರಿ ಧೋರಣೆ ಪ್ರದರ್ಶಿಸಿದ್ದ ಶ್ರೀಶಾಂತ್ ಬಗ್ಗೆ ಹರ್ಭಜನ್ ಆಕ್ರೋಶಗೊಂಡಿದ್ದರು. ಪಂದ್ಯದ ಬಳಿಕ ಹಸ್ತಾಲಾಘವ ಮಾಡುವಾಗ ಹರ್ಭಜನ್‌ ಹಿಂದೆ ಮುಂದೆ ನೋಡದೆ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದರು.
ಘಟನೆಯ ನೇರಪ್ರಸಾರ ವೀಕ್ಷಿಸುತ್ತಿದ್ದ ಜನರು ಹರ್ಭಜನ್‌ನಿಂದ ಕಪಾಳಮೋಕ್ಷ ಮಾಡಿದ ನಂತರ ಕಣ್ಣೀರುಗರೆಯುತ್ತಿದ್ದ ಶ್ರೀಶಾಂತ್‌ರ ಚಿತ್ರಗಳನ್ನು ನೋಡಿ ಮರುಕಪಟ್ಟಿದ್ದರು. ಈ ಘಟನೆ ಅಂದಿನಿಂದ ಕ್ರೀಡಾಕ್ಷೇತ್ರದ ಕಪ್ಪುಚಿತ್ರಗಳಲ್ಲೊಂದಾಗಿ ಉಳಿದುಹೋಯಿತು.
ಶನಿವಾರ ಹರ್ಭಜನ್ ʼಗ್ಲಾನ್ಸ್ ಲೈವ್ ಫೆಸ್ಟ್‌ನಲ್ಲಿʼ ವೀಡಿಯೊ ಚಾಟ್‌ನಲ್ಲಿ ಶ್ರೀಶಾಂತ್ ಅವರೊಂದಿಗೆ ಮಾತನಾಡುವ ವೇಳೆ ಬಜ್ಜಿ, ಆ ಘಟನೆ ಬಗ್ಗೆ ಎಷ್ಟು “ಮುಜುಗರ” ಅನುಭವಿಸಿದ್ದರೆಂಬ ವಿಚಾರವನ್ನು ಹಂಚಿಕೊಂಡರು.
“ಅಂದು ನಡೆದದ್ದು ತಪ್ಪು. ನಾನು ತಪ್ಪೆಸಗಿದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಶ್ರೀಶಾಂತ್‌ ರ ಒಂದು ತಪ್ಪನ್ನು ತಿದ್ದಲು ಹೋಗಿ ಮೈದಾನದಲ್ಲಿ ಶ್ರೀಶಾಂತ್ ರನ್ನು ನಾನು ಆಗ ಹೇಗೆ ನಡೆಸಿಕೊಂಡೆನೋ ಅದರಬಗ್ಗೆ ಬಗ್ಗೆ ದುಃಖ ಪಡುತ್ತೇನೆ. ಹಾಗೆ ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗ, ಹಾಗೆ ನಡೆದುಕೊಳ್ಳಬಾರದು ಎಂದು ಯೋಚಿಸುತ್ತೇನೆ ಎಂದು ಹರ್ಭಜನ್ ಮಾರ್ಮಿಕವಾಗಿ ನುಡಿದಿದ್ದಾರೆ.
ಆ ಘಟನೆಯ ತರುವಾಯ ಈ ಇಬ್ಬರು ಕ್ರಿಕೆಟಿಗರು 2011 ರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಹರ್ಭಜನ್ ಭಾರತದ ಪರ 367 ಅಂತರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 711 ವಿಕೆಟ್ ಪಡೆದಿದ್ದರೆ, ಶ್ರೀಶಾಂತ್ 90 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 169 ವಿಕೆಟ್ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!