May 3, 2026
Sunday, May 3, 2026
spot_img

ಹಾರ್ದಿಕ್ ಪಡೆಯ ಪ್ಲೇ ಆಫ್‌ ಕನಸು ಭಗ್ನ: ಮುಂಬೈ ನೆಲದಲ್ಲೇ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನ ಪ್ರತಿಷ್ಠಿತ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳ ಭವ್ಯ ಜಯ ದಾಖಲಿಸಿದೆ. ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸಿಎಸ್‌ಕೆ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಸೋಲಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡದ ಪ್ಲೇ ಆಫ್ ಕನಸು ಬಹುತೇಕ ನುಚ್ಚುನೂರಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. 1.2 ಓವರ್‌ಗಳಲ್ಲೇ ಮೊದಲ ವಿಕೆಟ್ ಕಳೆದುಕೊಂಡ ತಂಡಕ್ಕೆ ನಮನ್ ಧೀರ್ ಮತ್ತು ರಯಾನ್ ರಿಕಲ್ಟನ್ ಆಸರೆಯಾದರು. ನಮನ್ ಧೀರ್ 37 ಎಸೆತಗಳಲ್ಲಿ 57 ರನ್ ಗಳಿಸಿ ಮಿಂಚಿದರೆ, ರಿಕಲ್ಟನ್ 37 ರನ್‌ಗಳ ಕೊಡುಗೆ ನೀಡಿದರು. ಸೂರ್ಯಕುಮಾರ್ ಯಾದವ್ (21) ಮತ್ತು ಹಾರ್ದಿಕ್ ಪಾಂಡ್ಯ (18) ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ವಿಫಲರಾದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.

160 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈಗೆ ಆರಂಭದಲ್ಲೇ ಸಂಜು ಸ್ಯಾಮ್ಸನ್ (11) ವಿಕೆಟ್ ಕಳೆದುಕೊಂಡು ಹಿನ್ನಡೆಯಾಯಿತು. ಆದರೆ, ನಾಯಕನ ಜವಾಬ್ದಾರಿ ಹೊತ್ತ ರುತುರಾಜ್ ಗಾಯಕ್ವಾಡ್ (67 ರನ್, 48 ಎಸೆತ) ಮತ್ತು ಕಾರ್ತಿಕ್ ಶರ್ಮಾ (54 ರನ್, 40 ಎಸೆತ) ಎರಡನೇ ವಿಕೆಟ್‌ಗೆ 98 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು.

ಅಂತಿಮ ಹಂತದಲ್ಲಿ ಉರ್ವಿಲ್ ಪಟೇಲ್ ಕೇವಲ 12 ಎಸೆತಗಳಲ್ಲಿ 24 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಚೆನ್ನೈ ತಂಡವು ಇನ್ನು 11 ಎಸೆತಗಳು ಬಾಕಿ ಇರುವಂತೆಯೇ 160 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.

ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇದರಿಂದ ಪ್ಲೇ ಆಫ್ ರೇಸ್‌ ಕುತೂಹಲಕಾರಿಯಾಗಿದೆ. ಮತ್ತೊಂದೆಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬೀಳುವ ಹಂತಕ್ಕೆ ತಲುಪಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !