ತೋಪಿನ ತಿಮ್ಮಪ್ಪ ದೇವಾಲಯದಲ್ಲಿ ಹರಿಸೇವೆ: ಭಕ್ತರಿಂದ ತಾವರೆ ಎಲೆಯಲ್ಲಿ ಪ್ರಸಾದ ಸ್ವೀಕಾರ

ಹೊಸದಿಗಂತ ವರದಿ,ಮಂಡ್ಯ :

ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದಲ್ಲಿರುವ ಪುಣ್ಯ ಕ್ಷೇತ್ರವಾದ ಶ್ರೀ ತೋಪಿನ ತಿಮ್ಮಪ್ಪ ದೇವರ ಹರಿಸೇವೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ದೇಗುಲದಲ್ಲಿ ಪ್ರತೀ ವರ್ಷ ನಡೆಯುವ ಹರಿಸೇವೆಯಲ್ಲಿ ಲಕ್ಷ್ಮೀದೇವಿಗೆ ಪ್ರಿಯವಾದ ತಾವರೆ ಎಲೆಯಲ್ಲಿ ಪ್ರಸಾದ ನೀಡುವುದು ಸಂಪ್ರದಾಯವಾಗಿದೆ. ಸ್ಥಳೀಯರೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ದೇವರ ದರ್ಶನ ಪಡೆದು ತಾವರೆ ಎಲೆಯಲ್ಲಿ ಪ್ರಸಾದ ಸ್ವೀಕರಿಸಿ ಧನ್ಯತಾ ಭಾವ ಮೆರೆದರು.

ಹರಿಸೇವೆ ಅಂಗವಾಗಿ ದೇಗುಲದಲ್ಲಿ ಶನಿವಾರ ಮಧ್ಯಾಹ್ನ ಮೀಸಲು ನೀರು ತರುವುದರೊಂದಿಗೆ ಪೂಜಾ ಕಾರ‌್ಯಗಳು ವಿದ್ಯುಕ್ತವಾಗಿ ಆರಂಭಗೊಂಡವು. ಸಂಜೆ ತಲೆಮುಡಿ ಸೇವೆ, ಮಹಾಮಂಗಳಾರತಿ ನಂತರ ರಾತ್ರಿ ಬಂಡಿ ಮೆರವಣಿಗೆ, ಮಧ್ಯರಾತ್ರಿ ಬಾಯಿಬೀಗ, ಸೋಮನಕುಣಿತ, ಜವಳಿ ಕುಣಿತ, ಮಂಗಳವಾದ್ಯ ಮತ್ತು ತಮಟೆಯೊಂದಿಗೆ ಶ್ರೀ ತೋಪಿನ ತಿಮ್ಮಪ್ಪ ಉತ್ಸವ ಮೂರ್ತಿ, ಲಕ್ಷ್ಮೀದೇವಿ, ಶ್ರೀ ಮಂಕದ ಕಟ್ಟಮ್ಮ, ಶ್ರೀ ಮುದೇನಟ್ಟಮ್ಮ ದೇವರುಗಳ ಮೆರವಣಿಗೆ ಗ್ರಾಮದಲ್ಲಿ ರಾತ್ರಿ ಸಂಪ್ರದಾಯಬದ್ಧವಾಗಿ ನಡೆಯಿತು.

ಮುಂಜಾನೆ 8 ರಿಂದ 12 ಗಂಟೆಯವರೆಗೆ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಾವರೆ ಎಲೆಯಲ್ಲಿ ಪ್ರಸಾದ ರೂಪದ ಅನ್ನಸಂತರ್ಪಣೆ ನೆರವೇರಿತು. ಹರಿಸೇವೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವೇಳೆ ತಿರುಪತಿ ಮಾದರಿಯಲ್ಲಿ ಲಡ್ಡು ಪ್ರಸಾದವನ್ನು ಶ್ರೀ ತೋಪಿನ ತಿಮ್ಮಪ್ಪ ದೇವಸ್ಥಾನದ ವತಿಯಿಂದ ವಿತರಣೆ ಮಾಡಲಾಯಿತು.

ಸಚಿವ ಎನ್. ಚಲುವರಾಯಸ್ವಾಮಿ ದೇಗುಲದ ಜೀರ್ಣೋದ್ಧಾರಕ ಹಾಗೂ ಧರ್ಮದರ್ಶಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಕುಟುಂಬದವರು, ಮಾಜಿ ಶಾಸಕ ಸುರೇಶ್‌ಗೌಡ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!