ಹೊಸ ದಿಗಂತ ವರದಿ, ಮಡಿಕೇರಿ:
ಜಿಲ್ಲೆಯ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜೊತೆಗೆ ಸೌಜನ್ಯ, ವಿನಯದಿಂದ ನಡೆದುಕೊಳ್ಳಬೇಕು, ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದರೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಸಿದ್ದಾರೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಿಂದ ಮುಂದಿನ 10 ದಿನದೊಳಗೆ ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ‘ಪ್ರವಾಸಿ ಫಲಕ’ ಅಳವಡಿಸಲಾಗುವುದು. ಹಾಗೆಯೇ ಮುಖ್ಯ ಹೆದ್ದಾರಿಗಳಲ್ಲಿಯೂ ಸಹ ಸೂಚನಾ ಫಲಕ ಅಳವಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು.
ಕೊಡಗು ಜಿಲ್ಲೆಗೆ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಂತವಹರನ್ನು ಯಾವ ರೀತಿ ಕಾಣಬೇಕು ಎಂಬುದು ತಿಳಿದಿರಬೇಕು. ಅದನ್ನು ಬಿಟ್ಟು ಪ್ರವಾಸಿಗರ ಜೊತೆ ಕೆಟ್ಟದಾಗಿ ವರ್ತಿಸಿದರೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿದೆ ಎಂದು ಖಡಕ್ ಆಗಿ ನುಡಿದರು.
‘ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಕೋರಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಅಬ್ಬಿಫಾಲ್ಸ್ ಬಳಿ ಪ್ರವಾಸಿಗರ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದರು.
ಅಬ್ಬಿ ಜಲಪಾತದ ಬಳಿಯ ವಾಹನ ನಿಲುಗಡೆಗೂ, ಬಸ್ ನಿಲುಗಡೆಗೂ ಒಂದೂವರೆ ಕಿ.ಮೀ. ದೂರವಿದೆ. ಪದೇ ಪದೇ ವಾಹನ ನಿಲುಗಡೆ ವಿಷಯದಲ್ಲಿ ಕದನ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೇಳಿದರು.
ಡೀನ್ ಬೋಪಣ್ಣ , ನವೀನ್ ಅಂಬೆಕಲ್ಲು , ಪ್ರಮುಖರಾದ ಎಂ.ಬಿ.ದೇವಯ್ಯ , ಕರ್ನಲ್ , ಸೋಮವಾರಪೇಟೆಯ ಮಲ್ಲೇಶ್ ಮಾತನಾಡಿದರು.
ಪ್ರಮುಖರಾದ ಮೊಂತಿ ಗಣೇಶ್ , ಪ್ರವಾಸಿ ತಾಣಗಳಲ್ಲಿ ಗ್ರಾ.ಪಂ.ವತಿಯಿಂದಲೇ ಎಲ್ಲಾ ರೀತಿಯ ಮೂಲಸೌಲಭ್ಯ ಕಲ್ಪಿಸುವುದು, ಜೊತೆಗೆ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಯತೀಶ್ ಉಲ್ಲಾಳ್, ಪ್ರಮುಖರಾದ ಭಾಸ್ಕರ್, ರೋಹಿತ್, ಜಗದೀಶ್, ಪ್ರಾದೇಶಿಕ ಸಾರಿಗೆ ಮಧುರಾ ಇತರರು ಇದ್ದರು.