Saturday, December 9, 2023

Latest Posts

ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭ: ಸಂಸದ ಪ್ರತಾಪ್ ಸಿಂಹ

ಹೊಸ ದಿಗಂತ ವರದಿ, ಮಡಿಕೇರಿ:

ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, 4,130 ಕೋಟಿ ರೂ. ವೆಚ್ಚದಲ್ಲಿ 93 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಕುಶಾಲನಗರ-ಸಂಪಾಜೆ ಮಾರ್ಗದಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ ವರದಿ ನೀಡಬೇಕು. ಇಂತಹ ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಅಗತ್ಯ ಕ್ರಮವಹಿಸಬೇಕೆಂದು ಹೆದ್ದಾರಿ ಇಲಾಖೆಯ ಎಂಜಿನಿಯರ್’ಗಳಿಗೆ ಸಂಸದರು ಸೂಚಿಸಿದರು.

ಸದ್ಯದಲ್ಲೇ ಮುಂಗಾರು ಆರಂಭವಾಗಲಿದ್ದು, 2018 ರಿಂದೀಚೆಗೆ ಹೆಚ್ಚಿನ ಮಳೆಯಿಂದಾಗಿ ಹಾನಿಗಳು ಸಂಭವಿಸುತ್ತಿವೆ. ಪ್ರವಾಹ ಮತ್ತಿತರ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಮೇಲ್ಸೇತುವೆ ಪೂರ್ಣಗೊಳಿಸಿ: ಭಾಗಮಂಡಲ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಡಚಣೆ ಉಂಟಾಗದಂತೆ ಗಮನಹರಿಸಬೇಕು. ಕರ್ತೋಜಿ ಬಳಿ ಗುಡ್ಡ ಕುಸಿತ ಹಾಗೂ ಕೊಯನಾಡು ಬಳಿ ಪ್ರವಾಹ ಉಂಟಾಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಮುಂಗಾರು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ವಿವಿಧ ಇಲಾಖಾ ಹಂತದಲ್ಲಿ ಹಾಗೆಯೇ ತಾಲೂಕು ಮಟ್ಟದಲ್ಲಿಯೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಮಾತನಾಡಿ, ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಪ್ರಸ್ತಾಪಿಸಿ, ತಡೆಗೋಡೆ ನಿರ್ಮಾಣ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!