ಹರ್ಷ ಕೊಲೆ ಪ್ರಕರಣ: ಎನ್‌ಐಎಯಿಂದ ತನಿಖೆ ಚುರುಕು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಪೊಲೀಸರಿಂದ ತನಿಖಾ ಅಧಿಕಾರ ವಹಿಸಿಕೊಂಡ ನಂತರ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.

ಆರೋಪಿಗಳ ಹಿನ್ನೆಲೆ ಹಾಗೂ ಅವರ ಹಿಂದಿರುವ ಸಂಘಟನೆಗಳನ್ನು ಪತ್ತೆ ಹಚ್ಚಿದ ಬಳಿಕ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವುದು ಸೂಕ್ತ ಎಂದು ಭಾವಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶನಿವಾರ ಹೇಳಿದ್ದಾರೆ.

ರಾಜ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆಳವಾದ ತನಿಖೆ ನಡೆಸಿದೆ. ಇದು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ಕಂಡುಬಂದಿದೆ. ಇದರ ಹೊರತಾಗಿ ಗೃಹ ಸಚಿವನಾಗಿ ನಾನು ಪ್ರಕರಣದ ಬಗ್ಗೆ ಏನನ್ನೂ ಹೇಳಲಾರೆ ಎಂದರು.

ಸ್ಥಳೀಯ ಪೊಲೀಸರು ಎಲ್ಲಾ ದಾಖಲೆಗಳನ್ನು ಎನ್‌ಐಎಗೆ ಹಸ್ತಾಂತರಿಸಿದ್ದು, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಶಿವಮೊಗ್ಗ ಎಸ್‌ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

ಫೆ. 20ರಂದು ರಾತ್ರಿ ಶಿವಮೊಗ್ಗದಲ್ಲಿ ಗುಂಪೊಂದು ಹರ್ಷನನ್ನು ಹತ್ಯೆ ಮಾಡಿತ್ತು. ಇದು ಹಿಂಸಾಚಾರವನ್ನು ಪ್ರಚೋದಿಸಿದ್ದಲ್ಲದೇ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ಹಿಂಸಾಚಾರ ತಪ್ಪಿಸಲು ಶಿವಮೊಗ್ಗದಲ್ಲಿ 8 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿತ್ತು.

ನಂತರ, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿದರು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿ ಪ್ರಕರಣ ದಾಖಲಿಸಲಾಯಿತು. ಇದು ಕೊಲೆ ಪ್ರಕರಣಕ್ಕಿಂತ ಮಿಗಿಲಾದುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಯಿತು.

ಹರ್ಷ ಕುಟುಂಬಕ್ಕೆ ರಾಜ್ಯ ಸರಕಾರ ₹ 25 ಲಕ್ಷ ಪರಿಹಾರ ನೀಡಿದ್ದು, ಸಾರ್ವಜನಿಕರು ಕೂಡ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!