ಹರ್ಷ ಹತ್ಯೆ: ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ದಿಗಂತ ವರದಿ ಶಿವಮೊಗ್ಗ :

ಬಜರಂಗ ದಳ ಕಾರ್ಯಕರ್ತ ಹಿಂದೂ ಹರ್ಷ ಹತ್ಯೆಯ ಹಿಂದೆ ಸಂಚು ರೂಪಿಸಿದ ವ್ಯಕ್ತಿಗಳನ್ನು ಬಂಧಿಸಬೇಕು. ಕೊಲೆ ಮಾಡಿರುವ ಅರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತಹ ಕಾಯ್ದೆಯಡಿ ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗ ದಳದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ಕೊಲೆಯ ಸಂಚು ಹಾಗೂ ಪ್ರೇರೇಪಿಸಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಈ ಸಂಘಟನೆಗಳು ಮತಾಂಧ, ದೇಶ ವಿರೋಧಿಮಾನಸಿಕತೆಯ ಸಮಾಜ ಘಾತುಕ ಶಕ್ತಿಗಳಿಗೆ ನೈತಿಕ ಬೆಂಬಲವನ್ನು ಈ ಸಂಘಟನೆಗಳು ನೀಡುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರ್ಷ ಕೊಲೆ ಕೇವಲ ಒಂದು ಕೊಲೆ ಮಾತ್ರವಲ್ಲದೆ, ಹಿಂದು ಸಮಾಜವನ್ನು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಭಯಭೀತರನ್ನಾಗಿಸಲು ಈ ಸಂಘಟನೆಗಳು ನಡೆಸಿದ ಸರಣೀ ಕೊಲೆಗಳ ಒಂದು ಭಾಗ ಇದಾಗಿದೆ. ಇದರಿಂದಾಗಿ ಈ ಕೊಲೆಗಡುಕರ ಮೇಲೆ ಯುಎಪಿಎ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸುವಂತೆ ಆಗ್ರಹಿಸಲಾಗಿದೆ.

ಈ ರೀತಿಯ ಭಯೋತ್ಪಾದನಾ ಕೃತ್ಯಗಳನ್ನು ಹಿಂದೆ ನಡೆದಿರುವ ಹಿಂದು ಕಾರ್ಯಕರ್ತರ ಹತ್ಯೆಯ ಎಲ್ಲಾ ಮೊಕದ್ದಮೆಗಳ ತನಿಖೆ ನಡೆಸಲು ಗೃಹ ಇಲಾಖೆಯು ಆಂತರಿಕ ತನಿಖಾ ಸಂಸ್ಥೆಯ ವ್ಯಾಪ್ತಿಗೆ ತಂದು ಆ ಮೂಲಕವೇ ವಿಚಾರಣೆ ನಡೆಸಬೇಕು. ಹಿಂದು ಕಾರ್ಯಕರ್ತರನ್ನು ಕೊಲೆ ಮಾಡಿ ಪೈಶಾಚಿಕ ಕೃತ್ಯ ಮೆರೆಯುತ್ತಿರುವ ಅವಕಾಶವಾದಿ ರಾಜಕಾರಣಿಗಳು ಮಾನಸಿಕತೆಯನ್ನು ಬದಲಾಯಿಸಿಕೊಳ್ಳಬೇಕು.
ಹರ್ಷನ ಕೊಲೆ ನಡೆದ ಬಳಿಕ ನಡೆದ ಕೆಲವೊಂದು ಘಟನೆಗಳನ್ನು ಆಧರಿಸಿ ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ಹಾಕುತ್ತಿರುವ ಸುಳ್ಳು ಮೊಕದ್ದಮೆಗಳನ್ನು ಕೈ ಬಿಡಬೇಕು. ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!