ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ತಿಂಗಳು ಹರಿಯಾಣದಲ್ಲಿ ಕೋಮು ಉದ್ವಿಗ್ನತೆಯ ಕೇಂದ್ರಬಿಂದುವಾಗಿದ್ದ ನುಹ್ ಪ್ರದೇಶ ಮತ್ತೊಮ್ಮೆ ಸುದ್ದಿಯಲ್ಲಿದೆ. ಇಂದು ನುಹ್ ಪ್ರದೇಶದಲ್ಲಿ ಶೋಭಯಾತ್ರೆಗೆ ಹಿಂದು ಸಮುದಾಯಗಳು ಸಿದ್ಧತೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಬಿಗಿ ಬಂದೋಬಸ್ತ್ ಮಾಡಿದ್ದು, ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಇಂದು ಶೋಭಾಯಾತ್ರೆ ಆಯೋಜಿಸಲು ಸಜ್ಜಾಗಿದೆ.
ನುಹ್ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಎಚ್‌ಪಿ ಶೋಭಯಾತ್ರೆಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದರೂ, ಯಾತ್ರೆ ಮಾಡಿಯೇ ತೀರುತ್ತೇವೆಂದು ಹಿಂದುಪರ ಸಂಘಟನೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನುಹ್ ಜಿಲ್ಲೆಗೆ ಹೊರಗಿನವರು ಪ್ರವೇಶಿಸದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ್ದಾರೆ. ಪೊಲೀಸರು ಮತ್ತು ಅರೆಸೇನಾ ಪಡೆಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.
ಮತ್ತೊಂದೆಡೆ, ಭದ್ರತಾ ಪಡೆಗಳು ಐಡಿ ಕಾರ್ಡ್ ಹೊಂದಿರುವವರಿಗೆ ಮಾತ್ರ ನುಹ್ ಪ್ರವೇಶಿಸಲು ಅವಕಾಶ ನೀಡುತ್ತಿವೆ. ಹಲವೆಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲರನ್ನೂ ತಪಾಸಣೆ ನಡೆಸಲಾಗುತ್ತಿದೆ. 24 ಕಂಪನಿಗಳ ಅರೆಸೇನಾಪಡೆ ಮತ್ತು 1900 ಹರಿಯಾಣ ಪೊಲೀಸರನ್ನು ನಿಯೋಜಿಸಲಾಗಿದೆ. ಮೆರವಣಿಗೆಗಳು, ಯಾತ್ರೆಗಳು ಮತ್ತು ರ್ಯಾಲಿಗಳಿಗೆ ಅವಕಾಶವಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಿಗೆ ಆಯುಧಗಳು, ಬಂದೂಕುಗಳು ಮತ್ತು ಕೊಡಲಿಗಳನ್ನು ತರುವುದನ್ನು ಪೊಲೀಸರು ನಿಷೇಧಿಸಿದ್ದಾರೆ.