ಹಾಸನಾಂಬೆ ಉತ್ಸವಕ್ಕೆ ವಿದ್ಯುಕ್ತ ತೆರೆ: ಮುಂದಿನ ವರ್ಷ ದೇವಿಯ ದರ್ಶನೋತ್ಸವ ದಿನಾಂಕ ನಿಗದಿ

ಹೊಸದಿಗಂತ ವರದಿ ಹಾಸನ:

ಕಳೆದ 14 ದಿನಗಳಿಂದ ಲಕ್ಷಾಂತರ ಭಕ್ತರಿಗೆ ದರುಶನ ನೀಡಿದ ಹಾಸನಾಂಬ ದೇವಿಯ ಗರ್ಭಗುಡಿಯನ್ನು ಇಂದು ಮಧ್ಯಾಹ್ನ 12.23ಕ್ಕೆ ಗಣ್ಯರ ಸಮ್ಮುಖದಲ್ಲಿ ಮುಚ್ಚಲಾಯಿತು. ಈ ಮೂಲಕ 2023ರ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ಹಾಸನ ನಗರದ ಹಾಸನಾಂಬೆ ದೇವಸ್ಥಾನ ವರ್ಷಕ್ಕೆ ಕೇವಲ 15 ದಿನ ಮಾತ್ರ ಭಕ್ತರ ದರ್ಶನಕ್ಕೆ ಮುಕ್ತವಾಗಿರುತ್ತದೆ. 2023ರ ಹಾಸನಾಂಬ ದೇವಿಯ ದರುಶನವು ನವೆಂಬರ್‌ 2 ರಿಂದ ಆರಂಭವಾಗಿ ನವೆಂಬರ್ 15ರ ಮಧ್ಯಾಹ್ನಕ್ಕೆ ಮುಕ್ತಾಯವಾಗಿದೆ. ಇಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ನೇತೃತ್ವದಲ್ಲಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು.

ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಬಳಿಕ ಅರ್ಚಕರು ಹಾಗು ಅಧಿಕಾರಿಗಳು ಗರ್ಭಗುಡಿಯಿಂದ ಹೊರ ಬಂದರು. ಈ ವೇಳೆ ಕೊನೆಯ ಹಂತದಲ್ಲಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹಾಸನಾಂಬೆಯ ದರ್ಶನ ಪಡೆದರು. ಇದರೊಂದಿಗೆ ಈ ವರ್ಷ ದ 14 ದಿನಗಳ ಹಾಸನಾಂಬೆ ಉತ್ಸವಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು. ಹಾಸನಾಂಬೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರು ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಬೀಗ ಹಾಕಿದರು. ಈ ವೇಳೆ ಅರ್ಚಕರು ಎಲ್ಲರ ಮುಂದೆ ಬೀಗ ಪ್ರದರ್ಶನ ಮಾಡಿ ಬಾಗಿಲಿಗೆ ಬೀಗ ಹಾಕಿದರು.

ಇದುವರೆಗೆ ಹಾಸನಾಂಬೆ ಇತಿಹಾಸದಲ್ಲಿ ದಾಖಲೆ ಎಂಬಂತೆ ಈ ಬಾರಿ 12 ದಿನ ಪೂರ್ಣಗೊಂಡ ಬಳಿಕ 13 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಶಕ್ತಿ ಯೋಜನೆಯಿಂದ ಈ ಬಾರಿ ಮಹಿಳಾ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಇನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಆದಾಯ ಬಂದಿದೆ. ಈವರೆಗೆ ಟಿಕೆಟ್ ಹಾಗೂ ಲಡ್ಡು ಮಾರಾಟದಿಂದ 6,13,17,166 ರೂ ಆದಾಯ ಬಂದಿದೆ. 1 ಸಾವಿರ ಟಿಕೆಟ್ ಮಾರಾಟದಿಂದ 3,09,89,000 ರೂ. 300 ರೂ, ಟಿಕೆಟ್ ಮಾರಾಟದಲ್ಲಿ 2,35,04,400 ರೂ, ಲಡ್ಡು ಮಾರಾಟದಲ್ಲಿ 68,23,760 ರೂ ಸಂಗ್ರಹವಾಗಿದೆ.

ಮುಂದಿನ ವರ್ಷ ಅಂದರೆ 2024ಕ್ಕೆ ಅ. 24 ರಿಂದ ನ.3 ರ ವರೆಗೆ ಹಾಸನಾಂಬೆ ದೇವಿ ದರ್ಶನ ನೀಡಲಿದೆ. ಒಟ್ಟು 11. ದಿನ ಗರ್ಭಗುಡಿ ಬಾಗಿಲು ತೆರೆಯಲಿದ್ದು, 9 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!