ವೈಭವದಿಂದ ನೆರವೇರಿತು ಹಾಸನಾಂಬೆ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿ ಚಿಕ್ಕಜಾತ್ರೆ

ಹೊಸದಿಗಂತ ವರದಿ ಆಲೂರು:

ಹಾಸನಾಂಬೆ ದೇವಿ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿ ಚಿಕ್ಕಜಾತ್ರೆ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ವೈಭವದಿಂದ ನೆರವೇರಿತು.

ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕಾ ಅಲಂಕಾರ, ಉದ್ವಾರ್ಚನೆ ಸುಗ್ಗಿ ಕಾರ್ಯಕ್ರಮ ನಡೆಯಿತು. ಭಾನುವಾರ ಬೆಳಗ್ಗೆ ದೇವಸ್ಥಾನದ ಬಳಿ ಜಾತ್ರೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಾರಂಭವಾದವು. ಮಧ್ಯಾಹ್ನ 3.30 ಕ್ಕೆ ಸರಿಯಾಗಿ ದೇವಸ್ಥಾನದ ಎದುರು ಕೆಂಡೋತ್ಸವ ನೆರವೇರಿತು.

ಪ್ರಧಾನ ಅರ್ಚಕ ರಾಮಸ್ವಾಮಿಯವರು ಷೆಡ್‌ಗೋಪುರ ಹೊತ್ತು ದೇವಸ್ಥಾನವನ್ನು ಸುತ್ತಿದ ನಂತರ ಕೆಂಡ ಹಾಯ್ದರು ಈ ಸಂದರ್ಭದಲ್ಲಿ ಹರಕೆ ಹೊತ್ತ ನೂರಾರು ಮಹಿಳೆಯರು ಬಿಳಿ ಉಡುಪು ಧರಿಸಿ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಕೆಂಡ ಹಾಯ್ದು ಹರಕೆ ತೀರಿಸಿದರು.

ದೇವಸ್ಥಾನದ ಸುತ್ತ್ತ ಬಲಿ ಅನ್ನ ಹಾಕಲಾಯಿತು. ಭಕ್ತರು ದೇವಿ ಪಾದುಕೆ ಮುಟ್ಟಿ ನಮಸ್ಕರಿಸಲು ಅವಕಾಶ ಕಲ್ಪಿಸಲಾಗಿತ್ತು ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ರಾತ್ರಿ 10ರವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

ರಾತ್ರಿ 10 ಕ್ಕೆ ಬಾಗಿಲು ಹಾಕಿದ ನಂತರ ನ.26 ರಂದು ಬಾಗಿಲು ತೆರೆಯುವ ಜಾತ್ರೆ ನಡೆಯುತ್ತದೆ. ಅಲ್ಲಿಯವರೆಗೆ ದೇವಸ್ಥಾನದ ವಲಯದಲ್ಲಿ ಯಾರೂ ತಿರುಗಾಡುವಂತಿಲ್ಲ. ತಿರುಗಾಡಿದರೆ ದೇವಿ ಶಾಪಕ್ಕೆ ತುತ್ತಾಗುತ್ತಾರೆ ಎಂಬ ವಾಡಿಕೆ ನಡೆದುಬಂದಿದೆ.
ಜಾತ್ರೆಯಲ್ಲಿ ನೆರೆದಿದ್ದ ಭಕ್ತರಿಗೆ ಮಜ್ಜಿಗೆ ಪ್ರಸಾದ ವಿನಿಯೋಗ ಮಾಡಲಾಯಿತು ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು. ತಹಸೀಲ್ದಾರ್ ನಂದಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್, ಸಬ್ ಇನ್ಸ್ಪೆಕ್ಟರ್ ಜನಾಬಾಯಿ ಕಡಪಟ್ಟಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

ಶಾಸಕ ಸಿಮೆಂಟ್ ಮಂಜು ಮಾತನಾಡಿ ಶ್ರೀ ಕೆಂಚಾಂಬ ದೇವಿಯವರಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಅಪಾರ ಭಕ್ತವೃಂದವಿದ್ದು, ಈ ಭಾಗದ 48 ಹಳ್ಳಿಗಳ ಆರಾದ್ಯ ದೈವಸಂಭೂತಳಾಗಿದ್ದು ಪವಿತ್ರ ಸ್ಥಳವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘು ರವರು ಮಾತನಾಡಿ, ದೇವಸ್ಥಾನಕ್ಕೆ ಸೇರಿದ ಸುಮಾರು 74 ಎಕರೆ ಜಾಗವಿದೆ. ಈ ಜಾಗದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದರೆ ದೇವಾಲಯಕ್ಕೆ ಶಾಶ್ವತ ಆದಾಯ ಬರುತ್ತದೆ. ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಸಹಕರಿಸಬೇಕು. ದೇವಸ್ಥಾನದ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!