ಹೊಸದಿಗಂತ ವರದಿ ಅರಕಲಗೂಡು :
ಆಧುನಿಕ ಸಾಹಿತ್ಯ ಹಾಗೂ ಜಾಗತಿಕ ಸ್ಪರ್ಧಾ ಸಮಯದಲ್ಲಿ ಜನರು ಸಮಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದು, ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ತನ್ನದೇ ಆದ ಮಹತ್ವವನ್ನು ಗಳಿಸಿಕೊಳ್ಳುತ್ತಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಂದರೇಶ್ ತಿಳಿಸಿದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸ್ವರಚಿತ ಚುಟುಕು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಇರುವ ಸಾಹಿತ್ಯ ಅಭಿರುಚಿಗೆ ನೀರೆರೆಯುವ ಕಾರ್ಯ ನಡೆದರೆ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಎಂದು ನುಡಿದ ಅವರು ಭಾಷೆ ಮತ್ತು ಸಾಹಿತ್ಯ ಇಂದಿನದಲ್ಲ. ಹಲವು ಶಾಸನಗಳು ಇದಕ್ಕೆ ಸಾಕ್ಷಿಯಾಗಿವೆ. ಜನರಿಗೆ, ಆಡಳಿತಗಾರರಿಗೆ ಏನನ್ನು ತಿಳಿಸಬೇಕೋ ಆದನ್ನು ತಿಳಿಸಲು ಚುಟುಕುಗಳು ಒಂದು ಉತ್ತಮ ಮಾಧ್ಯಮವಾಗಿದೆ ಎಂದು ಅವರು ತಿಳಿಸಿದರು.
ಕವಿಯಿತ್ರಿ ಸುಮನಾ ಗೌತಮ್ ಮಾತನಾಡಿ ಮಕ್ಕಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸುಪ್ತ ಪ್ರತಿಭೆಗಳನ್ನು ಹೊರತರುವ ಕಾರ್ಯವನ್ನು ಸಂಘಟನೆಗಳು ಮಾಡಬೇಕಿದೆ ಎಂದರು. ಸಮಾರಂಭದಲ್ಲಿ ಮಾತನಾಡಿದ ಪತ್ರಕರ್ತ ಎ.ಪಿ.ಶಂಕರ್ ಅವರು ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಚುಟುಕುಗಳು ರಚಿತಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷೆ ಗೌತಮಿ ಶಶಿಧರ್, ಅರಕಲಗೂಡು ರೋಟರಿ ಸಂಸ್ಥೆ ಅಧ್ಯಕ್ಷರಾದ ಪ್ರಭು ಶ್ರೀಧರ್ ಮಾತನಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅ.ರಾ.ಸುಬ್ಬರಾವ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಕಾರ್ಯದರ್ಶಿ ನಾಗಮಣಿ, ಸುಧಾರಮೇಶ್, ಸವಿತಾ ಶ್ರೀಧರ್, ತೋಯಜಾಕ್ಷಿ, ಲೀಲಾವತಿ ಇತರರು ಇದ್ದರು.