ಹೊಸದಿಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ 5000ಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ್ದಾರೆ. ಇದಕ್ಕೆ ಹಮಾಸ್ ಮೇಲೆ ಪ್ರತಿದಾಳಿ ನಡೆಸುವ ಮೂಲಕ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ.
ಇದರಿಂದ ಇಸ್ರೇಲ್-ಪ್ಯಾಲೆಸ್ತೀನ್ ರಣರಂಗವಾಗಿ ಮಾರ್ಪಾಟ್ಟಿದೆ. ಈ ನಡುವೆ ಉದ್ಯೋಗ, ಪ್ರವಾಸಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಭಾರತೀಯರು ಯುದ್ಧಭೂಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಹಾಸನ ಜಿಲ್ಲೆಯ ಕೆಲವರು ಇಸ್ರೇಲ್‌ನಲ್ಲಿ ಸಿಲುಕಿರುವುದು ತಿಳಿದುಬಂದಿದೆ. ಈ ಬಗ್ಗೆ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.
ಇಸ್ರೇಲ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ, ಚನ್ನರಾಯಪಟ್ಟಣ, ಬೇಲೂರಿನ ಸುಮಾರು 25ಕ್ಕೂ ಅಧಿಕ ಜನರು ಸಿಲುಕಿರುವುದು ಮಾಹಿತಿ ಸಿಕ್ಕಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಯುದ್ಧಪೀಡಿತ ಇಸ್ರೇಲ್‌ನಿಂದ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಸದ್ಯ ಅಲ್ಲಿ ಸಿಲುಕಿರುವವರ ಹೆಸರು, ನೆಲಸಿರುವ ಸ್ಥಳದ ಮಾಹಿತಿ ಕಲೆಹಾಕಲಾಗುತ್ತಿದೆ. ಎಲ್ಲ ಮಾಹಿತಿ ಪಡೆದುಕೊಂಡು ಅವರನ್ನು ಕರೆತರಲು ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.