ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ವೈಎಸ್ ವಿವೇಕಾನಂದ ರೆಡ್ಡಿ ಕೊಲೆಗೆ ರಾಜಕೀಯವೇ ಕಾರಣ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಈ ವೇಳೆ ಚಾರ್ಜ್‌ಶೀಟ್‌ನಲ್ಲಿ YSRTP ಪಕ್ಷದ ಅಧ್ಯಕ್ಷೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ಹೇಳಿಕೆಯನ್ನು ದಾಖಲಿಸಿದೆ.
ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದ ಹಿಂದೆ ರಾಜಕೀಯ ಕಾರಣವಿತ್ತು ಎಂದು ಶರ್ಮಿಳಾ ಹೇಳಿದ್ದಾರೆ. ಇದೀಗ ಶರ್ಮಿಳಾ ಹೇಳಿಕೆ ಇದೀಗ ಆಂಧ್ರ ಪ್ರದೇಶ ಮುಖ್ಯಮಂತ್ರ ಜಗನ್ ಮೋಹನ್ ರೆಡ್ಡಿಗೆ ಹಿನ್ನಡೆ ತಂದಿದೆ.
ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದಲ್ಲಿ ವೈಎಸ್ ಶರ್ಮಿಳಾರನ್ನು 259ನೇ ಸಾಕ್ಷಿಯಾಗಿ ಸಿಬಿಐ ಪರಿಗಣಿಸಿದೆ.ವೈಎಸ್ ಶರ್ಮಿಳಾ ಹೇಳಿಕೆಯನ್ನು ಅಕ್ಟೋಬರ್ 7, 2022ರಲ್ಲಿ ಸಿಬಿಐ ಅಧಿಕಾರಿಗಳು ದಾಖಲಿಸಿದ್ದರು. ಲೋಕಸಭಾ ಚುನಾವಣೆ ವೇಳೆ ಕಡಪಾ ಕ್ಷೇತ್ರದಿಂದ ವೈಎಸ್ ಅವಿನಾಶ್ ರೆಡ್ಡಿ ಸ್ಪರ್ಧಿಸುತ್ತಿರುವುದು ವಿವೇಕಾನಂದ ರೆಡ್ಡಿಗೆ ಇಷ್ಟವಿರಲಿಲ್ಲ. ಈ ಕ್ಷೇತ್ರದಿಂದ ತಾನೇ ಸ್ಪರ್ಧಿಸುವುದಾಗಿ ನನ್ನ ಬಳಿ ಹೇಳಿದ್ದರು ಎಂದು ಶರ್ಮಿಳಾ ಹೇಳಿದ್ದಾರೆ.
ವಿವೇಕ ರೆಡ್ಡಿ ನಿರ್ಧಾರ, ವೈಎಸ್ ಜಗನ್ ಮೋಹನ್ ರೆಡ್ಡಿಗೂ ಇಷ್ಟವಿರಲಿಲ್ಲ. ಆದರೆ ವಿವೇಕಾನಂದ ರೆಡ್ಡಿ ಎಲ್ಲರನ್ನೂ ಒಪ್ಪಿಸಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಈ ಕುರಿತು ನಮ್ಮ ಮನಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಅವಿನಾಶ್ ರೆಡ್ಡಿಗೆ ಟಿಕೆಟ್ ನೀಡದೇ ತನಗೆ ನೀಡುವಂತೆ ಜಗನ್ ಬಳಿ ಮಾತುಕತೆ ನಡೆಸಲು ವಿವೇಕಾನಂದ ರೆಡ್ಡಿ ಮುಂದಾಗಿದ್ದರು ಎಂದು ಶರ್ಮಿಳಾ ಹೇಳಿದ ಹೇಳಿಕೆ ಸಿಬಿಐ ಉಲ್ಲೇಖಿಸಿದೆ.
ಇತ್ತ ಅವಿನಾಶ್ ರೆಡ್ಡಿ, ಮಾವ ವೈಎಸ್ ಭಾಸ್ಕರ್ ರೆಡ್ಡಿ ಸೇರಿದಂತೆ ವೈಎಸ್ ಕುಟುಂಬದ ವಿರೋಧ ಕಟ್ಟಿಕೊಂಡ ವಿವೇಕಾನಂದ ರೆಡ್ಡಿಯನ್ನು ರಾಜಕೀಯ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಶರ್ಮಿಳಾ ಹೇಳಿದ್ದಾರೆ. ಈ ಹೇಳಿಕೆಯಿಂದ ಸಿಎಂ ಜಗನ್ ಮೋಹನ್ ರೆಡ್ಡಿಗೆ ಸಂಕಷ್ಟ ಎದುರಾಗಿದೆ.
ವಿವೇಕಾನಂದ ರೆಡ್ಡಿ, ಜಗನ್ ತಂದೆ, ದಿವಂಗತ ಮಾಜಿ ಮುಖ್ಯಮಂತ್ರಿ ವೈಎಸ ರಾಜಶೇಖರ್ ರೆಡ್ಡಿಯ ಕಿರಿಯ ಸಹೋದರನಾಗಿದ್ದರು. 2019ರಲ್ಲಿ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿರುವ ವಿವೇಕಾನಂದ ರೆಡ್ಡಿ ನಿವಾಸದ ಬಚ್ಚಲುಮನೆಯಲ್ಲಿ ಕೊಲೆ ನಡೆದಿತ್ತು.