ಹಾವೇರಿ ಜಿಲ್ಲೆಯಲ್ಲಿ ಮತ್ತೆ ಮಾರ್ಧನಿಸಿದ ಗುಂಡಿನ ಸದ್ದು: ಮಹಿಳೆ ಪಾರು

ಹೊಸ ದಿಗಂತ ವರದಿ, ಹಾವೇರಿ:

ಜಿಲ್ಲೆಯ ಶಿಗ್ಗಾವಿ ಪಟ್ಟಣದ ಚಿತ್ರಮಂದಿರದಲ್ಲಿ ಜರುಗಿದ ಶೂಟೌಟ್ ಪ್ರಕರಣ ಜನರ ಮಾನಸದಿಂದ ಮಾಸುವ ಮುನ್ನವೇ ಮತ್ತೆ ಜಿಲ್ಲೆಯಲ್ಲಿ ಗುಂಡಿನ ಸದ್ದಿನಿಂದ ಜನತೆ ಬೆಚ್ಚಿ ಬೀಳುವತೆ ಮಾಡಿದೆ.
ಹೌದು, ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಗೂರು ಗ್ರಾಮದಲ್ಲಿ ಬುಧವಾರ ರಾತ್ರಿ ಬೈಕ್ ನಲ್ಲಿ ಬಂದ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳಿಬ್ಬರು ರಾತ್ರಿ 8 ಗಂಟೆ ಸಮಯದಲ್ಲಿ ಮನೆಯ ಮುಂದೆ ಕುಳಿತಿದ್ದ ಸಲ್ಮಾಭಾನು ಅಬ್ದುಲಖಾದರ ಮುಲ್ಲಾನವರ ಎನ್ನುವ ಮಹಿಳೆ ಮೇಲೆ ಗುಂಡು ಹಾರಿಸಿದ್ದು. ಈ ಘಟನೆಯಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿ ಒಟ್ಟು ಆರು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗುತ್ತಿದೆ. ಗುಂಡು ಹಾರಿಸಿದಾಗ ಮಹಿಳೆ ಜಾಗೃತಳಾಗಿ ನೆಲಕ್ಕೆ ಮಲಗಿಕೊಂಡ ಪರಿಣಾಮ ಮಹಿಳೆಗೆ ಒಂದೇ ಒಂದು ಗುಂಡು ತಗುಲದೇ ಎಲ್ಲವೂ ಮನೆ ಗೋಡೆಗೆ ಬಿದ್ದ ಪರಿಣಾಮ ಮಹಿಳೆಯ ಜೀವಕ್ಕೆ ಹಾನಿಯಾಗಿಲ್ಲ.
ದುಷ್ಕರ್ಮಿಗಳು ಗುಂಡು ಹಾರಿಸುವುದಕ್ಕೆ ಬಂದ ಸಂದರ್ಭದಲ್ಲಿ ಕತ್ತಲು ಇದ್ದ ಕಾರಣಕ್ಕೆ ಹಾರಿಸಿದ ಗುಂಡುಗಳ ಗುರಿ ತಪ್ಪಿದೆ. ಆ ಮಹಿಳೆ ಗುಂಡಿನಿಂದ ತಪ್ಪಿಸಿಕೊಂಡು ಮನೆಯ ಒಳಗೆ ಓಡಿಹೋಗುವಕ್ಕೂ ಕತ್ತಲು ಸಹಕಾರಿಯಾಗಿದೆ.
ಗುಂಡಿನ ದಾಳಿಗೆ ಕಾರಣ ಏನೆಂದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಮಹಿಳೆ ಅವಳ ಪತಿ ಅಬ್ದುಲಖಾದರನ ಮೇಲೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ ಪೊಲೀಸರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!