Wednesday, February 1, 2023

Latest Posts

ಸಾಧು, ಸಂತರ, ದಾರ್ಶನಿಕರ ಭಾವೈಕ್ಯತೆ ಏಕೈಕೆ ಜಿಲ್ಲೆ ಹಾವೇರಿ: ಲೇಖಕ ಡಾ.ವಿರೇಶ ಹಿತ್ತಲಮನಿ

ಹೊಸದಿಗಂತ ವರದಿ, ಹಾವೇರಿ:

ಕರ್ನಾಟಕ ಸಂಸ್ಕೃತಿಯ ಪ್ರತಿಬಿಂಬವಾಗಿ ರೂಪಿತವಾದ ಹಾವೇರಿ ಜಿಲ್ಲೆಯಲ್ಲಿ ಅನೇಕ ಸಾಧು, ಸಂತರು, ಶರಣರು, ಸಾಹಿತಿಗಳು, ದಾರ್ಶನಿಕರು ಬಾಳಿಬೆಳಗಿದ್ದಾರೆ. ಇಂಥಹ ಶ್ರೀಮಂತ ಹಿನ್ನಲೆಯ ಭಾವೈಕ್ಯತೆ ಮೆರೆದ ನಾಡಿನ ಏಕೈಕ ಜಿಲ್ಲೆ ಹಾವೇರಿಯದಾಗಿದೆ ಎಂದು ಪ್ರಾಂಶುಪಾಲ, ಲೇಖಕ ಡಾ.ವಿರೇಶ ಹಿತ್ತಲಮನಿ ಹೇಳಿದರು.
ಸ್ಥಳೀಯ ಆಕ್ಸ್‌ಫರ್ಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನ ಜಂಟಿಯಾಗಿ ಏರ್ಪಡಿಸಿದ್ದ ಪರಿಚಯ ವ್ಯಾಸಂಗ ಮಾಲಿಕೆ-೮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ದಿಗ್ಗಜರಾದ ಗಳಗನಾಥರು ಹಾಗೂ ಇತಿಹಾಸ ಸಂಶೋಧಕ ದಿಗ್ಗಜರಾದ ರಾಜಪುರೋಹಿತರ ಸೇವೆ ಸದಾ ಸ್ಮರಣೀಯ. ಇಂತಹ ಮಹನೀಯರ ಪರಿಚಯ ವಿದ್ಯಾರ್ಥಿಗಳಿಗೆ ಮಾಡಿಕೊಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡಿಗರನ್ನು ಜಾಗೃತಗೊಳಿಸಿದ ದಾರ್ಶನಿಕರ ೧೨ನೇ ಶತಮಾನ ಒಂದು ಸುವರ್ಣಯುಗ, ಹರಿದು ಹಂಚಿ ಹೋಗಿದ್ದ ಕನ್ನಡಿಗರಲ್ಲಿ ಭಾವನಾತ್ಮಕವಾಗಿ, ಆಡಳಿತಾತ್ಮಕವಾಗಿ ಒಂದುಗೂಡಬೇಕೆಂಬ ಪ್ರಭಲ ಇಚ್ಚೆ ಹುಟ್ಟುವಂತೆಮಾಡಿ ಕ್ರಿಯಾಶೀಲರನ್ನಾಗಿ ಮಾಡಿದವರಲ್ಲಿ ಸಾಹಿತಿಗಳು ಹಾಗೂ ಸಂಶೋಧಕರು ಎಂದು ಹೇಳಿದರು.
ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಆರ್.ವಿ.ಚಿನ್ನಿಕಟ್ಟಿ ಮಾತನಾಡಿ, ಶ್ರೇಷ್ಠ ದಾರ್ಶನಿಕರನ್ನು ಕಂಡ ಜಿಲ್ಲೆ ನಮ್ಮದಾಗಿರುವುದು ನಮ್ಮೆಲ್ಲರಿಗೆ ಅಭಿಮಾನ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕಗಳಿಕೆಯ ಜೊತೆಗೆ ಮೌಲ್ಯಗಳನ್ನು ಹಾಗೂ ವಾಚನಾಭಿರುಚಿಯನ್ನು ಬೆಳಸಿಕೊಳ್ಳಬೇಕು ಎಂದರು.
ಪ್ರತಿಷ್ಠಾನದ ಸದಸ್ಯ ಸಂಚಾಲಕ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಗಳಗನಾಥರು ಕನ್ನಡ ಕಾದಂಬರಿ ಲೋಕಕ್ಕೆ ಕ್ರಾಂತಿಯ ಮುನ್ನುಡಿ ಬರೆದವರು. ಶಿಕ್ಷಕರಾಗಿ, ಲೇಖಕರಾಗಿ, ಪ್ರಕಾಶಕರಾಗಿ ಹಾಗೂ ವಿತರಕರಾಗಿ ಅವರ ಬಹುಮುಖ ಸೇವೆ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ. ಸಾಹಿತ್ಯ ದಿಗ್ಗಜರಿಗೆ ಗಳಗನಾಥರು ಸ್ಪೂರ್ಥಿ, ಪ್ರೇರಣೆಯಾಗುತ್ತಾರೆ ಎಂದು ಹೇಳಿದರು.
ಹುಕ್ಕೇರಿಮಠ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರೊ.ವೀರಮ್ಮ ಹಲಗಣ್ಣನವರ ರಾಜಪುರೋಹಿತರ ಕುರಿತು ಮಾತನಾಡಿ, ನಾಡು-ನುಡಿಯ ಪರಮ ಆರಾಧಕ, ಸಂಶೋಧಕ ರಾಜಪುರೋಹಿತರ ನಿಜವಾದ ಪರಿಚಯವಾಗುವುದು ಅವರ ಸಂಶೋಧನ ಲೇಖನಗಳನ್ನೋದಿದಾಗ ತಮ್ಮ ಜೀವಿತದ ಕೊನೆಯವರೆಗೂ ಸಂಶೋಧನೆ ಕಾರ್ಯವನ್ನು ನಡೆಸಿಕೊಂಡೇ ಹೋದರು. ರಾಜಪುರೋಹಿತರ ಕುರಿತು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಮಮತಾ ಮಾಗಳ ಕನಕದಾಸರ ಕೀರ್ತನೆ ಹಾಗೂ ವಚನೆಗಳನ್ನು ಹಾಡಿದರು.
ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರಶಾಂತ ಬೆನ್ನೂರ, ಪ್ರಭುಸ್ವಾಮಿಮಠ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಂದನಾ, ಮಹಾಲಕ್ಷ್ಮೀ. ಗಾಯತ್ರಿ ಪ್ರಾಥನಾ ಗೀತೆ ಹಾಡಿದರು. ಪೃಥ್ವಿ ಸ್ವಾಗತಿಸಿದರು. ಲಕ್ಷ್ಮೀ ಕಾಳಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಮೆಹರ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!