ಹಾವೇರಿ ಗುಡಿಸಲು ಮುಕ್ತ ಜಿಲ್ಲೆಯಾಗಿ ಮಾಡಲಾಗುವುದು: ಸಚಿವ ವಿ.ಸೋಮಣ್ಣ

ಹೊಸದಿಗಂತ ವರದಿ, ಹಾವೇರಿ:

ಮುಖ್ಯಮಂತ್ರಿಗಳ ಜಿಲ್ಲೆಯಾದ ಹಾವೇರಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುವುದು. ಜಿಲ್ಲೆಯ ನಿವೇಶನ ರಹಿತ ಹಾಗೂ ವಸತಿ ರಹಿತರನ್ನು ಗುರುತಿಸಿ ವರದಿ ಸಲ್ಲಿಸಿದರೆ ಒಂದು ತಿಂಗಳೊಳಗಾಗಿ ಎಲ್ಲರಿಗೂ ಮನೆ, ನಿವೇಶನ ಮಂಜೂರು ಮಾಡಲಾಗುವುದು ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ವಿ.ಸೋಮಣ್ಣ ಘೋಷಿಸಿದರು.
ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲ್ಲದವರನ್ನು ಗುರುತಿಸಿ ಮಾಹಿತಿ ನೀಡಲು ಉಪವಿಭಾಗಾಧಿಕಾರಿಗಳು, ತಹಶೀಲ್ದಾರಗಳು ಹಾಗೂ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಣ ಅಧಿಕಾರಿಗಳಿಗೆ ಈ ಕುರಿತಂತೆ ಸೂಚನೆ ನೀಡಿದ ಅವರು, ಆದ್ಯತೆ ಮೇಲೆ ನಿವೇಶನ ವಸತಿ ರಹಿತರನ್ನು ಗುರುತಿಸಿ ಪಟ್ಟಿ ನೀಡಿದರೆ ಮಂಜೂರಾತಿ ನೀಡಲಾಗುವುದು ಎಂದರು.
ರಾಜ್ಯದ ಘೋಷಿತ ಕೊಳಚೆ ಪ್ರದೇಶದಲ್ಲಿ ೩.೧೮ ಲಕ್ಷ ಫಲಾನುಭವಿಗಳಿಗೆ ೮,೬೦೦ ಎಕರೆ ಪ್ರದೇಶದಲ್ಲಿ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಫಲಾನುಭವಿ ನೋಂದಣಿ ಶುಲ್ಕವಾಗಿ ಕೇವಲ ೧೨೦ ರೂ. ಪಾವತಿಸಿದರೆ ಹಕ್ಕುಪತ್ರ ನೀಡುವ ದೇಶದಲ್ಲೇ ಮಾದರಿಯಾದ ಯೋಜನೆಯನ್ನು ಕರ್ನಾಟಕಸ ರ್ಕಾರ ಜಾರಿಗೆ ತಂದಿದೆ. ಬಡವರಿಗೆ ಹಕ್ಕು ಪತ್ರ ನೀಡಲು ಏನನ್ನು ನಿರೀಕ್ಷೆ ಮಾಡದೆ ತಕ್ಷಣ ಹಕ್ಕುಪತ್ರ ನೀಡಿ. ಎಲ್ಲೆಲ್ಲಿ ನಿವೇಶನಕ್ಕೆ ಜಾಗವಿಲ್ಲವೋ ಆ ಪ್ರದೇಶದಲ್ಲಿ ಜಾಗ ಗುರುತಿಸಿ, ನಿವೇಶನ ಅಭಿವೃದ್ಧಿಗೆ ಅನುದಾನದ ಅವಶ್ಯಕತೆ ಇದ್ದರೆ ವಸತಿ ನಿಗಮದಿಂದ ಅಭಿವೃದ್ಧಿ ಅನುದಾನವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಿವೆ. ೩.೧೬ ಲಕ್ಷ ಫಲಾನುಭವಿಗಳು ಹಾಗೂ ಅಘೋಷಿತ ಕೊಳಚೆ ಪ್ರದೇಶದಲ್ಲಿ ಎರಡರಿಂದ ಮೂರು ಸಾವಿರ ಕುಟುಂಬಗಳು ವಾಸಿಸುತ್ತಿವೆ. ಅಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ಪರಿಶೀಲನೆಯಲ್ಲಿದೆ ಎಂದರು.
ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಓ ಮಹಮ್ಮದ ರೋಷನ್, ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅರುಣಕುಮಾರ ಹಡಗಲಿ ಹಾಗೂ ವೆಂಕಟೇಶ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಶೀಲ್ದಾರಗಳು, ತಾ.ಪಂ ಇಓಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ವಿವಿಧ ವಸತಿ ಯೋಜನೆಯ ಅನುಷ್ಠಾಧಿಕಾರಿಗಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!