ಹಾವೇರಿ ನಗರಸಭೆ ಬಿಜೆಪಿ ತೆಕ್ಕೆಗೆ: ಕಾರ್ಯಕರ್ತರಲ್ಲಿ ಸಂಭ್ರಮ

ಹೊಸದಿಗಂತ ವರದಿ ,ಹಾವೇರಿ:

ಹಾವೇರಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ರಾಮು ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸಾತೇನಹಳ್ಳಿ ಇವರು ಬಹುಮತದ ಆಧಾರದ ಮೇಲೆ ಚುನಾಯಿತರಾದರು.

ಮತದಾನದ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಪಟಾಕಿ ಸಿಡಿಸಿ, ಗುಲಾಲು ಎರಚಿ, ಶಿಳ್ಳೆ, ಕೇಕೇಗಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಪಕ್ಷೇತರರೇ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ‘ಬ’ವರ್ಗಕ್ಕೆ ಮೀಸಲಾಗಿತ್ತು.

ಒಟ್ಟು ೩೧ ಸದಸ್ಯ ಬಲದ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ ೧೩ಜನ, ಬಿಜೆಪಿ ಬೆಂಬಲಿತ ೯ಜನ ಮತ್ತು ಪಕ್ಷೇತರರು ೭ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. ಇನ್ನು ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ಮತಗಳು ಸೇರಿ ಒಟ್ಟು ೩೪ಮತಗಳಿದ್ದವು. ಈ ಪೈಕಿ ಶಾಸಕ ರುದ್ರಪ್ಪ ಲಮಾಣಿ ಮತ್ತು ಎಂಎಲ್‌ಸಿ ಸಲೀಂ ಅಹ್ಮದ ಕಾಂಗ್ರೆಸ್‌ನವರಾದರೆ, ಸಂಸದ ಬಸವರಾಜ ಬೊಮ್ಮಾಯಿ ಕಮಲ ಪಕ್ಷದವರು. ಇನ್ನುಪಕ್ಷಗಳ ಬಲಾ ಬಲ ನೋಡಿದಲ್ಲಿ ೧೦ ಬಿಜೆಪಿ, ೧೫ ಕಾಂಗ್ರೆಸ್ ಮತ್ತು ೭ಸ್ಥಾನಗಳಲ್ಲಿ ಪಕ್ಷೇತರರು ಇದ್ದು, ಪಕ್ಷೇತರರೇ ನಿರ್ಣಾಯಕರು. ಆದರೆ ಕಾಂಗ್ರೆಸ್‌ನ ೬ಜನ ಸದಸ್ಯರು ಚುನಾವಣೆಗೆ ಗೈರಾಗುವ ಮೂಲಕ ನಿರಾಯಾಸವಾಗಿ ಗೆಲುವನ್ನು ‘ಬಿಜೆಪಿ ಬೆಂಬಲಿತ’ರಿಗೆ ನೀಡಿದಂತಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶಶಿಕಲಾ ರಾಮು ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸಾತೇನಹಳ್ಳಿ ತಲಾ ೧೭ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಒಟ್ಟು ೩೪ ಮತದಾರರ ಪೈಕಿ ಕಾಂಗ್ರೆಸ್‌ನ ೬ಜನರು ಗೈರಾಗಿದ್ದರು. ಒಟ್ಟು ೨೮ಸದಸ್ಯರು ಹಾಜರಿದ್ದ ಹಿನ್ನೆಲೆಯಲ್ಲಿ ಬಹುಮತಕ್ಕೆ ೧೫ ಮತಗಳನ್ನು ಪಡೆಯಬೇಕಿತ್ತು. ಆದರೆ ಬಿಜೆಪಿ ಬೆಂಬಲಿತರು ೧೭ ಮತಗಳನ್ನು ಗಳಿಸುವ ಮೂಲಕ ಗೆಲುವಿನ ಕೇಕೇ ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!