ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಪಕ್ಷ ಸಂಘಟನೆಗಾಗಿ ಮಾರ್ಚ್ ತಿಂಗಳಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಅಧಿವೇಶನದ ಬಳಿಕ ಹಾಸನಕ್ಕೆ ಭೇಟಿ ನೀಡುತ್ತೇನೆ. 3 ವಾರಗಳ ಕಾಲ ಅಲ್ಲಿದ್ದು, ಪಕ್ಷದ ಸಂಘಟನೆಗಾಗಿ ಎಲ್ಲರೊಂದಿಗೆ ಸಭೆ ನಡೆಸುತ್ತೇನೆ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಪಕ್ಷದ ಮುಂದಿನ ಕಾರ್ಯತಂತ್ರ ರೂಪಿಸುತ್ತೇನೆಂದು ಹೇಳಿದರು.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಅವರು ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಕೆಲಸ ಮಾಡಬೇಕಿದೆ. ನಾನು, ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ಎಲ್ಲ ಹಿರಿಯ-ಕಿರಿಯ ಮುಖಂಡರೆಲ್ಲ ಸೇರಿ ಕಾರ್ಯಕರ್ತರ ಪಡೆಯೊಂದಿಗೆ ಪಕ್ಷ ಕಟ್ಟುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ. ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ತಿಳಿಸಿದರು.