ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ,. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 6ನೇ ಗ್ಯಾರಂಟಿ ಗೂಂಡಾ ಭಾಗ್ಯ ಜಾರಿಗೆ ತಂದಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ರೈತರಿಗೆ ಬ್ಯಾಂಕ್‌ಗಳು ಸಾಲ ನೀಡದ ಕಾರಣ, ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಅವಲಂಬಿಸುವಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಳಿಗೆ ಕೆಲಸ ಸಿಕ್ಕಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರನೇ ಗ್ಯಾರಂಟಿ ‘ಗೂಂಡಾ ಭಾಗ್ಯ’ ಪರಿಚಯಿಸಿರುವುದರಿಂದ, ಗೂಂಡಾಗಳು ಅತ್ಯಂತ ಸಮರ್ಪಣಾ ಭಾವದಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಮುಡಾ ಹಗರಣ ಕುರಿತು ಮಾತನಾಡಿ, 1,500 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವುದರೊಂದಿಗೆ ಇದು ಅತಿದೊಡ್ಡ ಹಗರಣವಾಗಿದೆ. ಹಗರಣದ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಧರಣಿ ನಡೆಸಿದ್ದು, ಲೋಕಾಯುಕ್ತರು ಮುಖ್ಯಮಂತ್ರಿ ಪರವಾಗಿ ವರದಿ ನೀಡುತ್ತಿರುವುದರಿಂದ ತನಿಖೆಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿದರು. ಇದೇ ವೇಳೆ ಹಗರಣದ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.