ಹೈದರಾಬಾದ್‌ನಲ್ಲಿ ಎಚ್‌ಡಿಕೆ- ಕೆಟಿಆರ್ ಭೇಟಿ: ಬಿಜೆಪಿ ವಿರುದ್ಧ ಮೈತ್ರಿಕೂಟ ರಚನೆ ಬಗ್ಗೆ ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2024 ರ ಸಾರ್ವತ್ರಿಕ ಚುನಾವಣೆಯ ಹೊಸ ರಾಜಕೀಯ ಸಮೀಕರಣಗಳ ನಡುವೆ, ಜಾತ್ಯತೀತ ಜನತಾ ದಳ (ಜೆಡಿಎಸ್) ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಮತ್ತು ಕೆ.ಚಂದ್ರಶೇಖರ ರಾವ್ (ಕೆಸಿಆರ್) ಸರ್ಕಾರದ ಸಚಿವ ಕೆ.ಟಿ.ರಾಮಾರಾವ್ ಅವರನ್ನು‌ ಇಂದು ಭೇಟಿಯಾದರು.
ಭಾನುವಾರ ಬೆಳಗ್ಗೆ ಹೈದರಾಬಾದ್‌ನಲ್ಲಿರುವ  ರಾಮಾರಾವ್‌ ನಿವಾಸಕ್ಕೆ ತೆರಳಿ ಹೆಚ್.ಡಿ.ಕುಮಾರಸ್ವಾಮಿ ಉಪಹಾರ ಸೇವಿಸಿ ಭೇಟಿಯಾದರು. ನಂತರ ತೆಲಂಗಾಣ ಮತ್ತು ಕರ್ನಾಟಕದ ರಾಜಕೀಯದ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಪ್ರಮುಖವಾಗಿ, ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಉಭಯ ನಾಯಕರು ಚರ್ಚಿಸಿದ್ದಾರೆ.

 

ಕೆಟಿಆರ್ ಭೇಟಿಯ ಕುರಿತು ಮಾತನಾಡಿರುವ ಕುಮಾರಸ್ವಾಮಿ, “ಈ ಸಂದರ್ಭದಲ್ಲಿ ಕರ್ನಾಟಕ-ತೆಲಂಗಾಣ ರಾಜ್ಯಗಳ ಸಮಸ್ಯೆಗಳು ಮತ್ತು ರಾಷ್ಟ್ರೀಯ ರಾಜಕೀಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ನನ್ನ ಹೃದಯವು ಕೆಟಿಆರ್ ಅವರ ಬಗ್ಗೆ ಅಭಿಮಾನ, ವಿಶ್ವಾಸ ಮತ್ತು ಗೌರವದಿಂದ ತುಂಬಿದೆ” ಎಂದು ಹೇಳಿದ್ದಾರೆ. ಅಲ್ಲದೆ, ಎಚ್‌ಡಿಕೆ ಅವರು ಇಂದು ಹೈದರಾಬಾದ್‌ನಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಕೆಸಿಆರ್ ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎಂಬುದು ಉಲ್ಲೇಖಾರ್ಹ.
ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕುಮಾರಸ್ವಾಮಿಯವರ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ.  ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯಿಂದ ಹೊರನಡೆದು ಬಿಹಾರದಲ್ಲಿ “ಮಹಾಘಟಬಂಧನ್ ಮೈತ್ರಿ” ಯಡಿ ಮತ್ತೆ ಸರ್ಕಾರವನ್ನು ರಚಿಸಿದ ಬೆನ್ನಲ್ಲೇ ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣದಲ್ಲಿ ಒಗ್ಗಟ್ಟಾಗಿ ಹೋರಾಡಲು ಪ್ರಯತ್ನ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!