ಅವರು ರಾಜೀನಾಮೆ ನೀಡಿಲ್ಲ, ಆದರೆ ಉತ್ತರ ದಾಯಿತ್ವ ತೋರಿದರು….

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಬಾಲ್‌ಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತ ಮಾನವೀಯತೆ ಇರುವ ಎಲ್ಲರ ಮನ ಕಲಕಿದೆ. ಇಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಕಿತ್ತು ಹಾಕಲಾಗಿರುವುದರಿಂದ ಈ ಭೀಕರ ದುರಂತ ಸಂಭವಿಸಿದೆ ಎಂಬುದೀಗ ಬಹುತೇಕ ಸ್ಪಷ್ಟಗೊಂಡಿದೆ. ಆದರೆ ಇಂತಹ ಹೇಯ ಕೃತ್ಯವನ್ನು ಎಸಗಿದವರು ಯಾರು ಎಂಬುದೀಗ ಕಂಡುಕೊಳ್ಳಬೇಕಾದ ಅಂಶ. ಜೊತೆಗೆ ಮೃತಪಟ್ಟ 280 ಮಂದಿ ದುರ್ದೈವಿಗಳ ಕುಟುಂಬಗಳಿಗೆ ನೆರವಾಗಲು ಎಲ್ಲರೂ ಕೈಜೋಡಿಸಬೇಕಿದ್ದು, ಗಾಯಾಳುಗಳಿಗೂ ಸೂಕ್ತ ನೆರವಿನ ಹಸ್ತ ಲಭಿಸುವಂತೆ ನೋಡಿಕೊಳ್ಳಬೇಕಿದೆ.ಈ ದುರಂತಕ್ಕೆ ಕಾರಣವಾದವರನ್ನು ಹುಡುಕಿ ಸೂಕ್ತ ಶಿಕ್ಷೆಯಾಗುವಂತೆ ಮಾಡುವ ಮೂಲಕ ಬಲಿಯಾದವರ ಕುಟುಂಬಗಳಿಗೆ ನ್ಯಾಯ ಲಭಿಸುವಂತಾಗಬೇಕು.

ದುರಂತ ನಡೆದುಹೋಗಿದೆ. ಆದರೆ ಮಾನವೀಯ ಹೃದಯಗಳು ಒಂದಾಗಿ ಸಂತ್ರಸ್ತರಿಗೆ ನೀಡುತ್ತಿರುವ ನೆರವು ಕೂಡ ಈಗ ಗಮನ ಸೆಳೆದಿದೆ. ಹೌದು, ಕೇಂದ್ರ ರೈಲ್ವೆ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಆದರೆ ಘಟನೆ ಸಂಭವಿಸಿ ಮೂರು ದಿನಗಳೊಳಗೆ ಅಸ್ತವ್ಯಸ್ತಗೊಂಡ ಹಳಿಗಳನ್ನು ಸರಿಪಡಿಸುವ ಕಠಿಣ ಕಾರ್ಯವನ್ನು ನಿಭಾಯಿಸಿ ಮತ್ತೆ ಹಳಿಯಲ್ಲಿ ರೈಲು ಓಡಾಟವನ್ನು ಸರಾಗಗೊಳಿಸುವ ಜೊತೆಗೆ ಈ ದುರಂತಕ್ಕೆ ಕಾರಣವಾದವರಿಗೆ ಶಿಕ್ಷೆ, ಮತ್ತೆ ಇಂತಹ ದುರಂತಗಳು ಸಂಭವಿಸದಂತೆ ಮಾಡುವ ಸಂಕಲ್ಪದೊಂದಿಗೆ ದುರಂತ ಸ್ಥಳದಲ್ಲೇ ಬೀಡುಬಿಟ್ಟ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉತ್ತರದಾಯಿತ್ವಕ್ಕೊಂದು ಹೊಸ ಭಾಷ್ಯ ಬರೆದಿದ್ದಾರೆ.

ಸ್ವತಃ ಇಂಜಿನಿಯರ್ ಆಗಿರುವ ಅಶ್ವಿನಿ ವೈಷ್ಣವ್ ಈ ದುರಂತ ಸ್ಥಳದಲ್ಲೇ ಉಳಿದುಕೊಂಡು ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ತನ್ನ ರೈಲ್ವೆ ಇಲಾಖೆಯ ನೂರಾರು ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯ ಜೊತೆಗೆ ಸ್ಥಳದಲ್ಲೇ ಉಳಿದು ಪರಿಹಾರ ಕಾರ್ಯಗಳನ್ನು ಕೈಗೊಂಡು ಸಂತ್ರಸ್ತರಿಗೆ ನೆರವಾದ ರೀತಿ ರೈಲ್ವೆ ಇತಿಹಾಸದಲ್ಲೇ ಒಂದು ಹೊಸ ಅನುಭವವಾಗಿದ್ದು, ಸ್ಥಳೀಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು ಕೂಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಖುದ್ದು ಸಾಂತ್ವನ ಹೇಳುವ ಜೊತೆಗೆ ಧೈರ್ಯ ತುಂಬಿದ್ದರು.ಇದನ್ನೆಲ್ಲ ದೂರದಲ್ಲಿ ಕುಳಿತ ಮಂದಿ ಸಿನಿಕತನದಿಂದ ಪ್ರತಿಕ್ರಿಯಿಸಿದರೆ ರಾಷ್ಟ್ರಕ್ಕೆ ನಷ್ಟ ಹಾಗೂ ವಿಧ್ವಂಸಕ ಶಕ್ತಿಗಳಿಗೆ ಬಲ ತುಂಬಿದಂತೆ ಎಂಬುದನ್ನು ನೆನಪಿಸಬೇಕಾಗಿ ಬಂದಿರುವುದು ವಿಪರ್ಯಾಸ ಎಂದು ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವಿ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿರುವುದು ಗಮನಾರ್ಹ.

ಕೇವಲ ರಾಜೀನಾಮೆ ನೀಡಿಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ ಸವಾಲು ಬಂದಾಗ ಅದನ್ನು ಪ್ರಾಮಾಣಿಕತೆಯಿಂದ ಎದುರಿಸಿ ಉತ್ತರ ಕಂಡುಕೊಳ್ಳುವುದು ಇಂದು ಆಗಬೇಕಿರುವ ಕಾರ್ಯ. ‘ಕವಚ್’ಸುರಕ್ಷಾ ವ್ಯವಸ್ಥೆ ಅಳವಡಿಸುವ ಕಾರ್ಯ ಭಾರತೀಯ ರೈಲ್ವೆಯಲ್ಲಿ ಪ್ರಗತಿಯಲ್ಲಿದ್ದು, ದೇಶದಲ್ಲಿ ಮಾನವ ರಹಿತ ರೈಲ್ವೆ ಲೆವೆಲ್‌ಕ್ರಾಸಿಂಗ್‌ಗಳನ್ನು ಕೂಡ ಮೋದಿ ಸರಕಾರ ತೆಗೆದುಹಾಕಿದೆ. ದೇಶದ ಬಹುತೇಕ ಎಲ್ಲ ರೈಲ್ವೆ ಹಳಿಗಳನ್ನೂ ವಿದ್ಯುದೀಕರಣ ಮಾಡುವ ಮೂಲಕ ರೈಲ್ವೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಹೆಚ್ಚಿನ ದಕ್ಷತೆ ಸಾಧಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ 2017 ರಿಂದ ಯಾವುದೇ ದೊಡ್ಡ ರೈಲು ದುರಂತಗಳು ನಡೆದಿರಲಿಲ್ಲ.ಆದರೂ ದುರದೃಷ್ಟವಶಾತ್ ಈ ದುರಂತ ಸಂಭವಿಸಿದೆ. ಇದರ ಹಿಂದೆ ವಿಧ್ವಂಸಕ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಿ ಹಾನಿಗೊಳಿಸುವ, ಹಳಿಗೆ ಹಾನಿ ಮಾಡುವ ಮಾನವರೂಪಿ ರಾಕ್ಷಸೀಯ ಪ್ರವೃತ್ತಿಯ ಜನರು ನಮ್ಮ ನಡುವೆಯೇ ಇರುವಾಗ, ರಾಜಕೀಯ ಸ್ವಾರ್ಥಕ್ಕಾಗಿ ಸರಕಾರದ ಬಲಗುಂದಿಸಿ ವಿಧ್ವಂಸಕ ಶಕ್ತಿಗಳಿಗೆ ಶಕ್ತಿ ತುಂಬುವವರಿರುವಾಗ ಇಂತಹ ದುರಂತಗಳು ನಡೆಯದಂತೆ ಶೇ.೧೦೦ರಷ್ಟು ದಕ್ಷತೆ ಸಾಧಿಸಬೇಕೆಂದು ನಿರೀಕ್ಷಿಸುವುದಾದರೂ ಎಂತು ?

ಮೊನ್ನೆ ದುರಂತ ಸಂಭವಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ರೈಲ್ವೆ ಸಚಿವೆ ಹಾಗೂ ಪ.ಬಂ.ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಗ್ಗೆ ಹೇಳಿಕೆ ನೀಡುತ್ತಿದ್ದ ವೇಳೆ ಕಣ್ಣೀರೊರೆಸಿಕೊಳ್ಳುತ್ತಿದ್ದ ಸಚಿವ ಅಶ್ವಿನಿ ವೈಷ್ಣವ್ , ತನ್ನ ಕಾರ್ಯದಕ್ಷತೆಯನ್ನು ತೋರಿದ ರೀತಿ ಇಂತಹ ದಕ್ಷರಿಂದ ರೈಲ್ವೆ ಮುಂದೆ ಇಂತಹ ಯಾವುದೇ ದುರಂತ ಕಾಣದಂತೆ ಮಾಡಲಿ ಎಂಬ ಹಾರೈಸುವಂತೆ ಮಾಡಿದೆ. ವಿಧ್ವಂಸಕ ಶಕ್ತಿಗಳು , ರಾಷ್ಟ್ರಘಾತಕ ಶಕ್ತಿಗಳ ಕುಕೃತ್ಯಗಳ ವಿರುದ್ಧ ಹೋರಾಡಬೇಕಾಗಿರುವ ಈ ಸಂದರ್ಭ, ಇಂತಹ ದುಷ್ಟಶಕ್ತಿಗಳ ಹೀನ ಕೃತ್ಯಗಳ ಸಂಚಿಗೆ ಬಲಿಯಾಗಿ ವೈಷ್ಣವ್ ಅವರಂತಹ ದಕ್ಷ, ಪ್ರಾಮಾಣಿಕ , ಸಂವೇದನಾಶೀಲ ಸಚಿವರು ಹಾಗೂ ಭಾರತೀಯ ರೈಲ್ವೆಗೆ ಹೊಸ ಕಾಯಕಲ್ಪ ನೀಡುತ್ತಿರುವ ಮೋದಿ ಸರಕಾರದ ನೈತಿಕ ಸ್ಥೈರ್ಯ ಕುಂದಿಸದೆ , ಸರಕಾರಕ್ಕೆ ಶಕ್ತಿಯಾಗಿ ನಿಲ್ಲಬೇಕಿರುವುದೇ ಜನತೆಯ ಜವಾಬ್ದಾರಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!