ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ಅಪಘಾತ ಇಡೀ ರಾಜ್ಯವನ್ನೇ ನಡುಗಿಸಿದೆ. ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಆರು ಅಮಾಯಕರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಮೂವರು ಸೇರಿದ್ದಾರೆ.
ಸರಣಿ ಅಪಘಾತಕ್ಕೆ ಕಾರಣವಾದ ಇಂಧನ ಸೋರಿಕೆ
ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊದಲಿಗೆ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿ ರಸ್ತೆಯುದ್ದಕ್ಕೂ ಇಂಧನ ಚೆಲ್ಲಿತ್ತು. ಹೀಗಾಗಿ ಸಂಚಾರವನ್ನು ಬೇರೆ ಲೇನ್‌ಗೆ ಬದಲಾಯಿಸಲಾಗಿತ್ತು. ಇದೇ ವೇಳೆ ಪುಣೆಯಿಂದ ವಾರ್ಧಾ ಕಡೆಗೆ ಹೋಗುತ್ತಿದ್ದ ಕಾರಿಗೆ, ಮೆಣಸಿನಕಾಯಿ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಲಾರಿಯ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ.
ಸ್ಥಳದಲ್ಲೇ ಸುಟ್ಟು ಕರಕಲಾದ ಆರು ಜೀವಿಗಳು
ಢಿಕ್ಕಿ ಹೊಡೆದ ತಕ್ಷಣ ಎರಡೂ ವಾಹನಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ವಾರ್ಧಾದ ಸಾಲೋಡ್ ಗ್ರಾಮದ ನಿವಾಸಿಗಳಾದ ರಾಜೇಶ್ ಟಿಪ್ಲೆ, ಪತ್ನಿ ಸುಷ್ಮಾ ಟಿಪ್ಲೆ, ಮಗಳು ಜಾಹ್ನವಿ ಟಿಪ್ಲೆ ಹಾಗೂ ಚಾಲಕ ಅಂಕುಶ್ ರಾವತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ಜೊತೆಗೆ ಲಾರಿ ಚಾಲಕ ಸಂಜಯ್ ಕುಮಾರ್ ಮತ್ತು ಕ್ಲೀನರ್ ಸಮರ್ಜಿತ್ ಪಾಲ್ ಕೂಡ ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.



