865 ಗಡಿ ಗ್ರಾಮಗಳಲ್ಲಿ ಆರೋಗ್ಯ ವಿಮಾ ಯೋಜನೆ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಮಿತ್ ಶಾಗೆ ದೂರು ನೀಡುವೆ ಎಂದ ಬೊಮ್ಮಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ರಾಜ್ಯದ 865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ.

ಈ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು, ಸುಪ್ರೀಂಕೋರ್ಟ್ ಆದೇಶ ನೀಡುವವರೆಗೂ ಗಡಿ ವಿಚಾರ ಕುರಿತಂತೆಯೂ ಯಾರೊಬ್ಬರೂ ಹೇಳಿಕೆ ನೀಡದಂತೆ ತಾಕೀತು ಮಾಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಇದೀಗ ಮಹಾರಾಷ್ಟ್ರ ಒಪ್ಪಂದವನ್ನು ಉಲ್ಲಂಘಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ರಾಜ್ಯದ ಗಡಿ ಭಾಗಗಳಲ್ಲಿ ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸುತ್ತಿರುವ ಆರೋಗ್ಯ ವಿಮಾ ಯೋಜನೆಯನ್ನು ತಕ್ಷಣ ಹಿಂಪಡಯಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

ಗಡಿಯಲ್ಲಿ ಕನ್ನಡ ಭಾಷಿಕರು ಹೆಚ್ಚಿರುವ ಮಹಾರಾಷ್ಟ್ರಕ್ಕೆ ಸೇರಿದ ಅನೇಕ ಗ್ರಾಮ ಪಂಚಾಯಿತಿ ಮತ್ತು ತಾಲೂಕುಗಳು ಕರ್ನಾಟಕಕ್ಕೆ ಸೇರಬೇಕು ಎಂದು ನಿರ್ಣಯ ಕೈಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕು, ಮಹಾರಾಷ್ಟ್ರ ಕ್ಯಾಬಿನೆಟ್ ನಿರ್ಣಯವನ್ನು ಬಲವಾಗಿ ಖಂಡಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!