ನಮ್ಮಲ್ಲಿ ಬಹುತೇಕರು ಬೆಳಗ್ಗೆ ಎದ್ದ ತಕ್ಷಣ ಹಾಲಿನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಬೆಳಗಿನ ಜಾವ ಹಾಲಿನ ಮಿಶ್ರಣವಿಲ್ಲದ ಕೇವಲ ಬ್ಲಾಕ್ ಕಾಫಿ ಡಿಕಾಕ್ಷನ್ ಅಥವಾ ಆಯುರ್ವೇದ ಮೂಲಿಕೆಗಳ ಕಷಾಯ/ಡಿಕಾಕ್ಷನ್ ಕುಡಿಯುವುದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಪ್ರೇಮಿಗಳು ಕೂಡ ಹಾಲಿನ ಕಾಫಿಯ ಬದಲು ಡಿಕಾಕ್ಷನ್ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಹಾಗಾದರೆ, ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ದೇಹಕ್ಕೆ ಸಿಗುವ ಪ್ರಮುಖ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿಯೋಣ.
ಚುರುಕುತನ ಮತ್ತು ಏಕಾಗ್ರತೆ ಹೆಚ್ಚಳ
ಡಿಕಾಕ್ಷನ್ನಲ್ಲಿ ಕೆಫೀನ್ ಅಂಶ ಅಧಿಕವಾಗಿರುತ್ತದೆ. ಇದು ಮೆದುಳಿನಲ್ಲಿ ನಿದ್ರೆಯ ಭಾವನೆಯನ್ನು ಉಂಟುಮಾಡುವ ಅಡೆನೊಸಿನ್ ಎಂಬ ರಾಸಾಯನಿಕವನ್ನು ತಡೆಯುತ್ತದೆ. ಇದರಿಂದಾಗಿ ಬೆಳಗ್ಗೆ ಎದ್ದ ತಕ್ಷಣ ಉಂಟಾಗುವ ಆಲಸ್ಯ ದೂರವಾಗಿ, ದೇಹದಲ್ಲಿ ತಕ್ಷಣವೇ ಹೊಸ ಶಕ್ತಿ ಮೂಡುತ್ತದೆ ಮತ್ತು ಗಮನ ಹರಿಸುವ ಸಾಮರ್ಥ್ಯ ಹೆಚ್ಚುತ್ತದೆ.
ತೂಕ ಇಳಿಕೆಗೆ ಸಹಕಾರಿ
ಹಾಲಿನ ಟೀ ಅಥವಾ ಕಾಫಿಗೆ ಹೋಲಿಸಿದರೆ ಡಿಕಾಕ್ಷನ್ನಲ್ಲಿ ಕ್ಯಾಲೊರಿಗಳು ತೀರಾ ಕಡಿಮೆ ಇರುತ್ತವೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ವರ್ಕ್‌ವೌಟ್ ಮಾಡುವ ಮುನ್ನ ಇದನ್ನು ಕುಡಿಯುವುದರಿಂದ ಶರೀರದಲ್ಲಿ ಕೊಬ್ಬು ಕರಗುವ ಪ್ರಕ್ರಿಯೆ ವೇಗಗೊಳ್ಳುತ್ತದೆ ಮತ್ತು ಅತಿಯಾದ ಹಸಿವನ್ನು ನಿಯಂತ್ರಿಸುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಬೆಳಗ್ಗೆ ಬಿಸಿಬಿಸಿಯಾದ ಡಿಕಾಕ್ಷನ್ ಸೇವಿಸುವುದರಿಂದ ಹೊಟ್ಟೆಯಲ್ಲಿನ ಜೀರ್ಣಕಾರಿ ಎಂಜೈಮ್‌ಗಳು ಸಕ್ರಿಯಗೊಳ್ಳುತ್ತವೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿ, ಕರುಳಿನ ಚಲನೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಉತ್ತಮ ನೈಸರ್ಗಿಕ ಪಾನೀಯವಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ನೀವು ಕಾಫಿ ಡಿಕಾಂಷನ್ ಬದಲು ಶುಂಠಿ, ಕಾಳುಮೆಣಸು, ತುಳಸಿ ಅಥವಾ ಜೀರಿಗೆಯಿಂದ ಮಾಡಿದ ಆಯುರ್ವೇದ ಮೂಲಿಕೆಗಳ ಡಿಕಾಂಷನ್ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಆಂಟಿ-ಇನ್ಫ್ಲಮೇಟರಿ ಗುಣಗಳು ಸಾಮಾನ್ಯ ಶೀತ, ಕೆಮ್ಮು ಮತ್ತು ಕಾಲೋಚಿತ ಜ್ವರದಂತಹ ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತವೆ.
ಮಧುಮೇಹ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಸಕ್ಕರೆ ರಹಿತ ಬ್ಲಾಕ್ ಕಾಫಿ ಡಿಕಾಕ್ಷನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಟೈಪ್-2 ಮಧುಮೇಹ ಬರುವ ಅಪಾಯ ಕಡಿಮೆಯಾಗುತ್ತದೆ. ಇದರಲ್ಲಿರುವ ಪಾಲಿಫೆನಾಲ್ಸ್‌ಗಳು ಹೃದಯದ ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.



