ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃದಯಾಘಾತದ ಪ್ರಕರಣಗಳು ಇತ್ತೀಚಿಗೆ ತೀರಾ ಹೆಚ್ಚಾಗಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರೈಲಿನಲ್ಲಿ ಪ್ರಯಾಣಿಸುವಾಗ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಆ ತಕ್ಷಣ ಅಲ್ಲಿದ್ದ ಟಿಟಿಇ ತಮ್ಮ ಸಮಯ ಪ್ರಜ್ಞೆಯಿಂದ ಸಿಪಿಆರ್ ನೀಡುವ ಮೂಲಕ ಆ ವ್ಯಕ್ತಿಯ ಪ್ರಾಣವನ್ನು ಉಳಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಟಿಟಿಇಯ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.
15708 ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ಟಿಟಿಇ ಸಿಪಿಆರ್ ನೀಡುವ ಮೂಲಕ ಒಂದು ಅಮೂಲ್ಯ ಜೀವವನ್ನು ಕಾಪಾಡಿದ್ದಾರೆ. ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ವ್ಯಕ್ತಿಯೊಬ್ಬರು ಹಠಾತ್ ಹೃದಯಾಘಾತಕ್ಕೆ ತುತ್ತಾಗಿದ್ದು, ಆ ತಕ್ಷಣ ತನ್ನ ಸಮಯ ಪ್ರಜ್ಞೆಯಿಂದ ಟಿಟಿಇ ಮನಮೋಹನ್ ಸಿಪಿಆರ್ ನೀಡಿ ಆ ವ್ಯಕ್ತಿಯ ಪ್ರಾಣವನ್ನು ಉಳಿಸಿದ್ದಾರೆ. ನಂತರ ಆ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಛಾಪ್ರಾ ರೈಲ್ವೆ ನಿಲ್ದಾಣದಿಂದ ಆಸ್ಪತ್ರೆಗೆ ಕಳುಹಿಸಲಾಯಿತು.
North Eastern Railway ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿಯನ್ನು ಮಲಗಿಸಿ ಟಿಟಿಇ ಸಮಯಕ್ಕೆ ಸರಿಯಾಗಿ ಸಿಪಿಆರ್ ಚಿಕಿತ್ಸೆ ನೀಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಸಿಪಿಆರ್ ಚಿಕಿತ್ಸೆಯ ಮೂಲಕ ಟಿಟಿಇ ಮನಮೋಹನ್ ಒಂದು ಅಮೂಲ್ಯ ಜೀವವನ್ನು ಉಳಿಸಿದ್ದು, ಇವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.