ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ವೈಶಲಿ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಭೀಕರ ದೋಣಿ ದುರಂತ ಸಂಭವಿಸಿದ್ದು, 13 ಮಕ್ಕಳು ಮೃತಪಟ್ಟಿದ್ದಾರೆ. 20 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದ್ದು, ಮಕ್ಕಳು ನೀರಿನಲ್ಲಿ ಮುಳುಗಿ ಪ್ರಾಣಬಿಟ್ದಿದ್ದಾರೆ, ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆ ರಾತ್ರಿ ಮಕ್ಕಳು ವೈಶಾಲಿ ಸಮೀಪದ ಹಳ್ಳಿಯಿಂದ ಪಕ್ಕದ ಹಳ್ಳಿಗೆ ಹಬ್ಬದಲ್ಲಿ ಭಾಗಿಯಾಗಲು ದೋಣಿಯಲ್ಲಿ ಪ್ರಯಾಣ ನಡೆಸಿದ್ದಾರೆ. ಈ ವೇಳೆ ಏಕಾಏಕಿ ದೋಣಿ ಮಗುಚಿ ಬಿದ್ದಿದ್ದು, ತಕ್ಷಣವೇ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈವರೆಗೂ ಏಳು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮೃತಪಟ್ಟ 13 ಮಕ್ಕಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದುಬಂದಿದೆ. ದೋಣಿ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಗಾಯಗೊಂಡವರಿಗೆ ತಲಾ 50,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ.
ಬಿಹಾರ ಸಾಮ್ರಾಟ್ ಚೌಧರಿ ಘಟನೆಯ ಬಗ್ಗೆ ಮಾತನಾಡಿದ್ದು, ಅತೀವ ದುಃಖವಾಗಿದೆ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಘಟನೆ ನಡೆದಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.



