ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಕಜೆ ಎಂಬಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದಂಪತಿಯ ಎರಡು ವರ್ಷದ ಹೆಣ್ಣು ಮಗು ಮನೆಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರಬೇಕು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.
ಮೃತರನ್ನು ಬಜಗೋಳಿಯ ದಿನೇಶ್ ಹಾಗೂ ಅವರ ಪತ್ನಿ ಸಂಗೀತಾ ಎಂದು ಗುರುತಿಸಲಾಗಿದೆ. ಈ ದಂಪತಿ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದರು. ಇಂದು ಮಧ್ಯಾಹ್ನವಾದರೂ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಪರಿಶೀಲನೆ ನಡೆಸಿದಾಗ ಒಳಗೆ ಈ ಭೀಭತ್ಸ್ಯ ಘಟನೆ ಕಣ್ಣಿಗೆ ಬಿದ್ದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮನೆಯೊಳಗೆ ತೆರಳಿದಾಗ ಸಂಗೀತಾ ಮೃತ ಸ್ಥಿತಿಯಲ್ಲಿ ಹಾಗೂ ದಿನೇಶ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಇದನ್ನೂ ಓದಿ:
ಘಟನೆ ಅರಿಯದೆ ನಿದ್ದೆಗೆ ಜಾರಿದ್ದ ಮಗು
ಈ ಸಂಧರ್ಭ ದಂಪತಿಯ ಎರಡು ವರ್ಷದ ಹೆಣ್ಣು ಮಗು ಮನೆಯಲ್ಲಿ ಒಂಟಿಯಾಗಿತ್ತು. ಮಗು ಅತ್ತು ಅತ್ತು ಮತ್ತೆ ನಿದ್ದೆಗೆ ಜಾರಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ದೃಶ್ಯ ಎಂತಾ ಕಲ್ಲು ಹೃದಯದವರನ್ನೂ ಕರಗಿಸುವ ರೀತಿ ಇತ್ತು.
ಒಂದು ತಿಂಗಳ ಹಿಂದೆ ಮನೆ ಬಿಟ್ಟಿದ್ದ ದಂಪತಿ
ಮೂಲಗಳ ಮಾಹಿತಿ ಪ್ರಕಾರ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ದಿನೇಶ್ ಮತ್ತು ಸಂಗೀತಾ ಕೆಲ ದಿನಗಳ ಹಿಂದೆ ಆ ಸ್ಥಳವನ್ನು ತೊರೆದು ಹೋಗಿದ್ದರು. ಬಳಿಕ ಜೂನ್ 19ರ ಸಂಜೆ ಮತ್ತೆ ಆಲಂಕಾರು ಕಜೆಯ ಬಾಡಿಗೆ ಮನೆಗೆ ಬಂದಿದ್ದರು ಎನ್ನಲಾಗಿದೆ. ಆದರೆ ಮರುದಿನವೇ ಈ ದುರಂತ ಸಂಭವಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಸಾವಿನ ಹಿಂದಿನ ನಿಜಾಂಶ ತನಿಖೆ ಬಳಿಕ ಗೊತ್ತಾಗಬೇಕಿದೆ.



