ಹೊಸದಿಗಂತ ವರದಿ ದಾಂಡೇಲಿ :
ನಗರದ ಲೆನಿನ್ ರಸ್ತೆಯಲ್ಲಿರುವ ಅರ್ಪಿತ ಟಿಫಿನ್ ಕಾರ್ನರ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ದಗದಗನೆ ಹೊತ್ತಿ ಉರಿದ ಘಟನೆ ಸೋಮವಾರ ನಸುಕಿನ 4:00 ಗಂಟೆ ಸುಮಾರಿಗೆ ನಡೆದಿದೆ.
ಮಾಹಿತಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಈ ಅವಘಡದಲ್ಲಿ ಅರ್ಪಿತ ಟಿಫಿನ್ ಕಾರ್ನರ್ ಅಂಗಡಿಯ ಸಂಪೂರ್ಣ ಸಾಮಗ್ರಿಗಳು ಹೊತ್ತಿ ಉರಿದಿವೆ. ಅಂಗಡಿಯಲ್ಲಿದ್ದ ಎಲ್ಲಾ ಪರಿಕರಗಳು ಸುಟ್ಟು ಬೂದಿಯಾಗಿವೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾಸ್ಥಳಕ್ಕೆ ನಗರ ಠಾಣೆಯ ಪಿಎಸ್‌ಐ ಅಮೀನ್ ಅತ್ತಾರ್, ಎಎಸ್‌ಐ ರಾಜಪ್ಪ ದೊಡ್ಮನಿ*, ಪೊಲೀಸ್ ಸಿಬ್ಬಂದಿಗಳಾದ ಮಹಾದೇವ ಬಳೇಗಾರ, ದಯಾನಂದ ಲೋಂಡಿ, ಸುನೀಲ್ ದುಗ್ಗಾಡೆ, ಚಂದ್ರಶೇಖರ ಪಾಟೀಲ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಭೇಟಿ ನೀಡಿ, ಬೆಂಕಿ ನಂದಿಸಲು ಅಗ್ನಿಶಾಮಕ ದಳಕ್ಕೆ ಸಹಕರಿಸಿದರು.



