ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್ನಿಂದ ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಹೆಚ್ಚು ಮಳೆಯಾಗಿ ಅವಾಂತರಗಳು ಸಂಭವಿಸಿದೆ.
ಕತ್ತಲಾಗುತ್ತಿದ್ದಂತೆ ಎಂಟ್ರಿಯಾಗುವ ಮಳೆಯ ಆರ್ಭಟಕ್ಕೆ ರಾಜಧಾನಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಸದ್ಯ ನಿನ್ನೆ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ. ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದ್ದು, ಜನಜೀವನ ತತ್ತರಿಸಿದೆ.
ನಗರದ ಬಿನ್ನಿಪೇಟೆಯಲ್ಲಿ ಕಾಂಪೌಂಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಕಾಂಪೌಂಡ್ ಕುಸಿತ ಪರಿಣಾಮ 16 ಮನೆಗಳಿಗೆ ಜಲದಿಗ್ಬಂಧನ ಉಂಟಾಗಿದೆ.
ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್ಗಳಿದ್ದು, 2ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಹಾಕಿತ್ತು. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನ ಶಿಫ್ಟ್ ಮಾಡಲಾಗಿದೆ. ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ನಲ್ಲಿ 80 ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ.
ಎಡೆಬಿಡದೆ ಸುರಿದ ಮಳೆಗೆ ಕೆ.ಆರ್. ಮಾರ್ಕೆಟ್‌ನ ರಸ್ತೆಯೆಲ್ಲಾ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ಜನರು ನಲುಗಿ ಹೋದರು. ವಾಹನ ಸವಾರರು ಪರದಾಡಿದರು.
ಮಹಾಮಳೆಯಿಂದ ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದ್ದಾರೆ. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು. ಹಾಗಾಗಿ ಫ್ಲೈವುಡ್ ಹಾಗೂ ಗ್ಲಾಸ್ ಅಂಗಡಿ ಸಂಪೂರ್ಣ ಜಲಾವೃತವಾಗಿತ್ತು. ಯಲಹಂಕದ ಅಟ್ಟೂರಿನಲ್ಲಿ ಮಳೆ ಅಬ್ಬರಿಸಿದೆ. ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ನೀರನ್ನ ಹೊರ ಹಾಕಲು ಕುಟುಂಬದವರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.
ಒಂದಡೆ ಮಳೆ, ಮತ್ತೊಂದೆಡೆ ಟ್ರಾಫಿಕ್ ಜಾಮ್ ಆಯಿತು. ಬಳ್ಳಾರಿ ರಸ್ತೆ ಮಳೆಯಿಂದಾಗಿ ಸ್ಥಬ್ದವಾಗಿತ್ತು. ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಇತ್ತ ಮಲ್ಲೇಶ್ವರಂ 17 ನೇ ಕ್ರಾಸ್ ಕ್ಲೌಡ್‌ನೈನ್ ಆಸ್ಪತ್ರೆ ಎದುರು ಬೃಹತ್ ಮರವೊಂದು ಧರೆಗುರುಳಿದೆ. ಮರದಡಿ ರಸ್ತೆಯ ಪಕ್ಕ ಪಾರ್ಕ್ ಮಾಡಲಾಗಿದ್ದ ಕಾರುಗಳು ಜಖಂಗೊಂಡಿವೆ. ಕರೆಂಟ್ ಸ್ಥಗಿತಗೊಂಡು, ರಸ್ತೆ ಸಂಚಾರ ಬಂದ್ ಆಗಿತ್ತು.
ಟಿ.ದಾಸರಹಳ್ಳಿಯ ಮಹೇಶ್ವರಿನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ದಿನಸಿ, ಬಟ್ಟೆ ನೀರುಪಾಲಾಗಿವೆ. ವರುಣಾರ್ಭಟಕ್ಕೆ ಬೆಂಗಳೂರು-ಹೊಸೂರು ಹೆದ್ದಾರಿ ಕೆರೆಯಂತಾಗಿದೆ. ನೀರಲ್ಲಿ ಸಿಲುಕಿ ಕಾರು ಚಾಲಕ ಪರದಾಡಿದ್ದಾರೆ. ರಸ್ತೆ ಜಲಾವೃತವಾಗಿದ್ರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಳೆಗೆ ಸರ್ಜಾಪುರ ಮುಖ್ಯರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತು ಜನ ಪರದಾಡ್ತಿದ್ದಾರೆ. ರೈಲ್ವೆ ಟ್ರ್ಯಾಕ್ಗೆ ನೀರು ಬರುತ್ತೆ ಅಂತ ರೈಲ್ವೇ ಇಲಾಖೆ ನೀರು ಹರಿಯುವ ಜಾಗ ಮುಚ್ಚಿದ್ದು ಫಜೀತಿ ತಂದಿದೆ. ರಾಜಾಜಿನಗರದಲ್ಲೂ ಮಳೆ ಧಾರಾಕಾರವಾಗಿ ಸುರಿಯಿತ್ತು. ಮಂಜುನಾಥನಗರದಲ್ಲಿ ಹತ್ತಾರು ಬೈಕ್ಗಳು ಮುಳುಗಡೆಯಾಗಿದ್ವು. ರಸ್ತೆ ಬದಿ ಅಂಗಡಿಗಳಿಗೂ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ. ಮಳೆಯಿಂದಾಗಿ ಪವರ್ ಲೈನ್‌ಗಳಿಗೆ ಹಾನಿಯಾಗಿದ್ದು, ಇಂದು ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.